
ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಐದು ವರ್ಷದ ಬಾಲಕಿ ಅತ್ಯಾಚಾರ ಯತ್ನ ಮತ್ತು ಕೊಲೆ ಪ್ರಕರಣದ ಆರೋಪಿಯ ಎನ್‌ಕೌಂಟರ್ ಮತ್ತು ಈ ಎನ್‌ಕೌಂಟರ್‌ನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಹುಬ್ಬಳ್ಳಿ ಪೊಲೀಸ್ ಮಹಿಳಾ ಪಿಎಸ್‌ಐ ಅನ್ನಪೂರ್ಣ ಅವರಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.
ಹೌದು, ಹುಬ್ಬಳ್ಳಿ ಬಾಲಕಿ ಅತ್ಯಾಚಾರ ಯತ್ನ ಮತ್ತು ಕೊಲೆ ಪ್ರಕರಣದ ಆರೋಪಿಯ ಎನ್‌ಕೌಂಟರ್‌ನಲ್ಲಿ ಪಿಎಸ್‌ಐ ಅನ್ನಪೂರ್ಣ ನಿರ್ವಹಿಸಿದ ಪಾತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಪಿಎಸ್‌ಐ ಅನ್ನಪೂರ್ಣ ಅವರ ಬಗ್ಗೆ ಇದೀಗ ರಾಜ್ಯದ ಮನೆ ಮನೆಗಳಲ್ಲಿ ಚರ್ಚೆಯಾಗುತ್ತಿದ್ದು, ಈ ದಿಟ್ಟ ಅಧಿಕಾರಿಣಿಯನ್ನು ಜನರು ತಮ್ಮ ಮನೆ ಮಗಳಂತೆ ನೋಡುತ್ತಿದ್ದಾರೆ.

ಆರೋಪಿ ರಿತೇಶ್ ಕುಮಾರ್ ಎನ್‌ಕೌಂಟರ್ ಘಟನೆಯಲ್ಲಿ ಪಿಎಸ್‌ಐ ಅನ್ನಪೂರ್ಣ ಅವರೂ ಕೂಡ ಗಾಯಗೊಂಡಿದ್ದು, ಅವರಿಗೆ ಹುಬ್ಬಳ್ಳಿಯ ಕೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪಿಎಸ್‌ಐ ಅನ್ನಪೂರ್ಣ ಅವರ ಚೇತರಿಕೆಗೆ ಇಡೀ ರಾಜ್ಯದ ಜನ ಪ್ರಾರ್ಥಿಸುತ್ತಿದ್ದಾರೆ. ಇದೇ ವೇಳೆ ಆಕೆಯ ದಿಟ್ಟತನವನ್ನು ಜನರು ಕೊಂಡಾಡುತ್ತಿದ್ದಾರೆ.
ಭದ್ರಕಾಳಿಯಾದ ಪಿಎಸ್ಐ ಅನ್ನಪೂರ್ಣ: ಬಾಲಕಿ ಹತ್ಯೆ ಮಾಡಿದ ಅರೋಪಿ ರಿತೀಶ ಕುಮಾರ್ ಓಡಿ ಹೋಗುತ್ತಿದ್ದಾಗ ಮೊದಲು ಮೂರು ಸುತ್ತು ಗುಂಡು ಹಾರಿಸಿ, ಬಳಿಕ ಆರೋಪಿಯು ಅದಕ್ಕೆ ಬೆದರದೇ ಇದ್ದಾಗ ಆತನ ಕಾಲಿಗೆ ಹಾಗೂ ಬೆನ್ನಿಗೆ ಗುಂಡು ಹೊಡೆದು ಲೇಡಿ ಸಿಂಗಮ್ ಎನಿಸಿಕೊಂಡಿದ್ದಾರೆ.
ಸದ್ಯ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪಿಎಸ್‌ಐಯಾಗಿರುವ ಅನ್ನಪೂರ್ಣ ಆರ್ ಅವರು, ಮೂಲತಃ ಬೆಳಗಾವಿ ಜಿಲ್ಲೆಯ ಗೋಕಾಕಿನವರು.
2017ರ ಬ್ಯಾಚ್‌ನ ಅಧಿಕಾರಿಯಾಗಿರುವ ಇವರು, ಹುಬ್ಬಳ್ಳಿ ಶಹರ ಠಾಣೆ, ಸಿಇಎನ್ ಠಾಣೆಯಲ್ಲಿ ಪಿಎಸ್‌ಐ ಆಗಿ ಕರ್ತವ್ಯ ನಿರ್ವಹಿಸಿ, ಇದೀಗ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಜನರಿಂದ ಮೆಚ್ಚುಗೆ: ಪಿಎಸ್‌ಐ ಅನ್ನಪೂರ್ಣ ಅವರ ದಿಟ್ಟತನವನ್ನು ಕೊಂಡಾಡುತ್ತಿರುವ ರಾಜ್ಯದ ಜನತೆ, ಆರೋಪಿ ರಿತೇಶ್ ಕುಮಾರ್ ಎನ್‌ಕೌಂಟರ್ ಸರಿಯಾದ ಕ್ರಮ ಎಂದು ಹೇಳುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಚರ್ಚೆ: ಪಿಎಸ್‌ಐ ಅನ್ನಪೂರ್ಣ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗಳಾಗುತ್ತಿದ್ದು, ನೆಟ್ಟಿಗರು ಈ ಅಧಿಕಾರಿಯನ್ನು “ಭದ್ರಕಾಳಿ” ಎಂದು ಕೊಂಡಾಡಿದ್ದಾರೆ. ಅನೇಕರು ಆಕೆಯ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದು, ಆರೋಪಿಗೆ ತಕ್ಕ ಶಿಕ್ಷೆ ನೀಡಿದ “ಪಿಎಸ್‌ಐ ಅನ್ನಪೂರ್ಣ ಅವರಿಗೆ ಧನ್ಯವಾದ” ಎಂದು ಹೇಳಿದ್ದಾರೆ.
ಸದ್ಯ ಆರೋಪಿ ಪರಾರಿಯಾಗುವಾಗ ಹಲ್ಲೆಗೊಳಗಾಗಿರುವ ಅವರು, ಕೆಎಂಸಿ-ಆರ್‌ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.