
ಶಿಗ್ಗಾಂವಿ: ಕ್ಷುಲ್ಲಕ ವಿಚಾರಕ್ಕೆ ದಲಿತ ಬಾಲಕನೊರ್ವನನ್ನು ಶಾಲೆಯಿಂದ ಅಪಹರಣ ಮಾಡಿದಲ್ಲದೇ ಮನಬಂದಂತೆ ಥಳಿಸಿ, ಚಿತ್ರಹಿಂಸೆ ನೀಡಿರುವ ಅಮಾನವೀಯ ಘಟನೆ, ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ನಡೆದಿದೆ.
ನಾಗರಾಜ್ ಶೇಖರ್ ಮೈಸೂರು (14) ಎಂಬಾತನೇ ಹಲ್ಲೆಗೆ ಒಳಗಾದ ವಿದ್ಯಾರ್ಥಿಯಾಗಿದ್ದಾನೆ. ಬೆಳಗ್ಗೆ ಶಾಲೆಗೆ ಹೋಗಿದ್ದಾನೆ, ಏಕಾಏಕಿಯಾಗಿ ಅದೇ ಊರಿನ ಮಂಜುನಾಥ ಬಗಾಡೆ, ಗಣಪತಿ ಗುಣೋಜಿ ಇನ್ನಿತರರು ಸೇರಿಕೊಂಡು ಶಾಲೆಗೆ ನುಗ್ಗಿ ಯಾರ ಅನುಮತಿ ಪಡೆಯದೇ, ಬಾಲಕ ನಾಗರಾಜ ಮೈಸೂರನ್ನು ಅಪಹರಣ ಮಾಡಿದಲ್ಲದೇ, ಮನಬಂದಂತೆ ಥಳಿಸಿ, ಅವಾಚ್ಯವಾಗಿ ನಿಂದಿಸಿ, ಜಾತಿ ನಿಂದನೆ ಮಾಡಿದ್ದಾರಂತೆ.
ಅಷ್ಟೇ ಅಲ್ಲದೇ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಕಂಬಕ್ಕೆ ಕಟ್ಟಿ ಹಾಕಿ ಚಿತ್ರಹಿಂಸೆ ಮಾಡಿದ್ದಾರೆಂದು ನಾಗರಾಜ್ ಮೈಸೂರಿನ ಪೋಷಕರು ಆರೋಪಿಸಿದ್ದಾರೆ.

ಸದ್ಯ ಹಲ್ಲೆಗೆ ಒಳಗಾದ ವಿದ್ಯಾರ್ಥಿಯನ್ನು ಪೋಷಕರು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದು, ಈ ಘಟನೆ ತಡಸ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿಗಳಿಗೆ ದೂರು, ಕ್ರಮವೇನು?

ದಲಿತ ಬಾಲಕನನ್ನು ಮೈತುಂಬ ಬಾಸುಂಡೆ ಬರೆ ಬಿಳ್ಳುವಂತೆ ಹೊಡೆದಿದ್ದಾರೆ. ಬಾಲಕನ ಪೋಷಕರು ಈಗಾಗಲೇ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ. ಅಲ್ಲದೇ ಶಾಲೆಯ ಮುಖ್ಯೋಪಾಧ್ಯಾಯರು ಸಹಿತ ಲಿಖಿತವಾಗಿ ಪತ್ರ ಬರೆದಿದ್ದು, ಅದರಲ್ಲಿ ಯಾವುದೇ ಅನುಮತಿ ಇಲ್ಲದೇ ಶಾಲೆಯಿಂದ ಕರೆದುಕೊಂಡು ಹೋಗಿದ್ದಾರೆಂದು ತಿಳಿಸಿದ್ದಾರೆ.
ಹಾವೇರಿ ಜಿಲ್ಲೆೆಯಲ್ಲಿ ಇಂತಹದೊಂದು ಅಮಾನವೀಯ ಘಟನೆ ನಡೆದರು ಸಹ ತಡಸ್ ಪೊಲೀಸರು ಏನೂ ಕ್ರಮ ಕೈಗೊಂಡಿದ್ದಾರೆ? ಎಂಬ ಪ್ರಶ್ನೆ ಉಂಟಾಗಿದ್ದು, ಈ ಬಗ್ಗೆ ಹಾವೇರಿ ಜಿಲ್ಲಾಡಳಿತ ಸೂಕ್ತ ತನಿಖೆ ನಡೆಸಿ ನಾಗರಾಜ್ ಮೈಸೂರನಿಗೆ ನ್ಯಾಯ ಒದಗಿಸಲು ಕಾರ್ಯ ಮಾಡಬೇಕಿದೆ.