ರಿಂಗ್ ರೋಡ್ನಲ್ಲಿ ಸ್ಕೂಟರ್ಗ್ಯಾಂಗ್ ಅಟ್ಟಹಾಸ: 30,500 ರೂ. ಸುಲಿಗೆ ಪ್ರಕರಣ ಭೇದಿಸಿದ ಬೆಂಡಿಗೇರಿ ಪೊಲೀಸರು
ಹುಬ್ಬಳ್ಳಿ: ಲಾರಿ ಚಾಲಕರಿಗೆ ಬೆದರಿಕೆ ಹಾಕಿ ಹಣ ಸುಲಿಗೆ ಮಾಡಿದ ಮೂವರು ಆರೋಪಿಗಳನ್ನು ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣೆ ಪೊಲೀಸರು 24 ಗಂಟೆಗಳೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹುಬ್ಬಳ್ಳಿಯ ರಿಂಗ್ ರೋಡ್ನಲ್ಲಿ ಸ್ಕೂಟರ್ನಲ್ಲಿ ಬಂದ ಮೂವರು ಕಳ್ಳರು, ಲಾರಿಯನ್ನು ನಿಲ್ಲಿಸಿ ಚಾಲಕನಿಗೆ ಬೆದರಿಕೆ ಹಾಕಿ ಆತನ ಬಳಿ ಇದ್ದ ನಗದು ಹಣ ದೋಚಿ ಪರಾರಿಯಾಗಿದ್ದ ಘಟನೆ ಇತ್ತೀಚೆಗೆ ನಡೆದಿತ್ತು. ಆಂಧ್ರಪ್ರದೇಶ ಮೂಲದ ಕರಿಯಮಾಮಹೇಶ ಕರಿಚಿನ್ನಾ ಸಿಂಹಾಚಲಮ್ ಎಂಬ ಲಾರಿ ಚಾಲಕ ಹುಬ್ಬಳ್ಳಿಯಿಂದ ಗದಗ ಕಡೆಗೆ ತೆರಳುತ್ತಿದ್ದ ವೇಳೆ, ಕುಂದಗೋಳ ಬಸ್ ನಿಲ್ದಾಣದ ಸಮೀಪ ಸ್ಕೂಟರ್ನಲ್ಲಿ ಬಂದ ಆರೋಪಿಗಳು “ಲಾರಿಯ ಟಯರ್ ಪಂಚರ್ ಆಗಿದೆ” ಎಂದು ತಿಳಿಸಿ ಚಾಲಕನನ್ನು ಕೆಳಗೆ ಇಳಿಸಿದ್ದಾರೆ. ಬಳಿಕ ಆತನಿಗೆ ಬೆದರಿಕೆ ಹಾಕಿ 30,500 ರೂ. ನಗದು ಕಿತ್ತುಕೊಂಡು ಪರಾರಿಯಾಗಿದ್ದರು.
ಈ ಕುರಿತು ಲಾರಿ ಚಾಲಕ ನೀಡಿದ ದೂರಿನ ಮೇರೆಗೆ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು, ಸುಲಿಗೆಕೋರರನ್ನು ಪತ್ತೆಹಚ್ಚುವ ಕಾರ್ಯಾಚರಣೆ ನಡೆಸಿ ಅಮಿತ್ ಗುಂಜಾಳ, ವಿಶಾಲ ಬಿಜವಾಡ ಹಾಗೂ ರಾಕೇಶ್ ಜಮಖಂಡಿ ಎಂಬ ಮೂವರನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳಿಂದ ಹಣ ವಶಪಡಿಸಿಕೊಳ್ಳಲಾಗಿದ್ದು, ಮುಂದಿನ ತನಿಖೆ ಮುಂದುವರೆದಿದೆ. ಸಾರ್ವಜನಿಕರ ಸುರಕ್ಷತೆಗಾಗಿ ಇಂತಹ ಅಪರಾಧಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ವರದಿ. ಶಶಿಕಾಂತ್ ಕೊರವರ




