ಅದರಗುಂಚಿಯ ಗ್ರಾಮ ಒನ್ ಕೇಂದ್ರಕ್ಕೆ ಚಾಲನೆ
ಹುಬ್ಬಳ್ಳಿ: ಗ್ರಾಮೀಣ ಭಾಗದ ಜನರು ಸರ್ಕಾರಿ ಸೇವೆಗಳನ್ನು ಪಡೆಯಲು ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಿಗೆ ಅಲೆಯುವುದನ್ನು ತಪ್ಪಿಸಲು ಮುಂದಾಗಿರುವ ರಾಜ್ಯ ಸರ್ಕಾರವು ಗ್ರಾ.ಪಂ.ವ್ಯಾಪ್ತಿಯಲ್ಲಿ ಗ್ರಾಮ ಒನ್ ಕೇಂದ್ರಗಳನ್ನು ಸ್ಥಾಪಿಸಲು ಮುಂದಾಗಿದ್ದು, ಪದವೀಧರ ಯುವ ಜನತೆಗೆ ಕೇಂದ್ರ ನಿರ್ಮಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಗ್ರಾಪಂ ಅಧ್ಯಕ್ಷ ಮಲ್ಲಿಕಾರ್ಜುನ ಕಳ್ಳಿಮನಿ ಹೇಳಿದರು.
ತಾಲೂಕಿನ ಅದರಗುಂಚಿ ಗ್ರಾಮದಲ್ಲಿ ನೂತನವಾಗಿ ತೆರೆಯಲಾದ ಗ್ರಾಮ ಒನ್ ನಾಗರೀಕ ಸೇವಾ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸರಕಾರಿ ಸೇವೆಗಳನ್ನು ಪಡೆಯಲು ಗ್ರಾಮೀಣ ಭಾಗದ ಜನರು ತಾಲೂಕು ಅಥವಾ ಜಿಲ್ಲಾ ಕೇಂದ್ರಗಳಿಗೆ ಹೋಗಿಬರಬೇಕಾದ ಪರಿಸ್ಥಿತಿಯಿದೆ. ಆ ಹಿನ್ನೆಲೆಯಲ್ಲಿ ಜನರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಗ್ರಾಮ ಒನ್ ಕೇಂದ್ರ ತೆರೆಯುತ್ತಿದ್ದು, ನೂರಾರು ಸೇವೆಗಳು ಜನರಿಗೆ ಗ್ರಾಮಗಳಲ್ಲಿಯೇ ಲಭ್ಯವಾಗಲಿವೆ. ಗ್ರಾಮಸ್ಥರು ಇದರ ಸದುಪಯೋಗವನ್ನು ಪಡೆಯಬೇಕೆಂದು ತಿಳಿಸಿದರು.
ಗ್ರಾಪಂ ಸದಸ್ಯ ಹೊನ್ನಪ್ಪ ಸೋಲಾರಗೊಪ್ಪ ಮಾತನಾಡಿ, ಸರಕಾರಿ ಸೇವೆಗಳನ್ನು ಪಡೆಯಲು ಸರಕಾರಿ ಕಚೇರಿಗಳಿಗೆ ಪ್ರಯಾಣಿಸುವ ಸಮಯ ಮತ್ತು ಹಣ ಖರ್ಚು ಮಾಡುವುದನ್ನು, ಸರತಿ ಸಾಲಿನಲ್ಲಿ ಸೇವೆಗಳಿಗಾಗಿ ಕಾಯುವ ಹಾಗೂ ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಸರಕಾರಿ ಸೇವೆಗಳು ನೇರವಾಗಿ ಜನರಿಗೆ ತಲುಪಿಸುವ ಉದ್ದೇಶವನ್ನು ಕೇಂದ್ರಗಳು ಹೊಂದಿವೆ. ಅದರಲ್ಲಿಯೂ ಪ್ರಮುಖವಾಗಿ ನಾಗರಿಕರ ಅನುಕೂಲಕ್ಕಾಗಿ ಗ್ರಾಮ ಒನ್ ಕೇಂದ್ರಗಳು ಬೆಳಗ್ಗೆ 8 ರಿಂದ ರಾತ್ರಿ 8ರವರೆಗೆ ತೆರೆದಿರುವುದರಿಂದ ಜನರು ಬಿಡುವಿನ ಸಮಯದಲ್ಲಿ ಕೇಂದ್ರಗಳಿಗೆ ಹೋಗಿ ತಮಗೆ ಬೇಕಾದ ಸೌಲಭ್ಯಗಳನ್ನು ಪಡೆಯಬಹುದಾಗಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷ ಬಸಮ್ಮ ಮಾಳಗಿ, ಮಾಜಿ ಉಪಾಧ್ಯಕ್ಷ ನಿಂಗಣ್ಣ ಎಲಿವಾಳ, ಮಲ್ಲಿಕಾರ್ಜುನ ಭರಮಗೌಡ್ರ, ಸದಸ್ಯರಾದ ಮುಕ್ತುಂಹುಸೇನ ಬಡಿಗೇರ, ಶೇಖರ್, ಅಶೋಕ ಸೋಲಾರಗೊಪ್ಪ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.