ಮಾದಕ ವಸ್ತು ಸಿಗದೆ ಜೈಲಿನಲ್ಲಿ ದಾಂಧಲೆ: ಜೈಲರ್ ಮೇಲೆ ಕೈದಿಗಳ ಮಾರಣಾಂತಿಕ ದಾಳಿ
ಕಾರವಾರ. ಜಿಲ್ಲಾ ಕಾರಾಗೃಹದಲ್ಲಿ ಮಾದಕ ವಸ್ತುಗಳ ಪೂರೈಕೆಗೆ ನಿರ್ಬಂಧ ವಿಧಿಸಿದ್ದರಿಂದ ಸಿಟ್ಟುಗೊಂಡ ಇಬ್ಬರು ವಿಚಾರಣಾಧೀನ ಕೈದಿಗಳು ಜೈಲರ್ ಹಾಗೂ ಮೂವರು ಸಿಬ್ಬಂದಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಕಾರವಾರದಲ್ಲಿ ಬೆಳಕಿಗೆ ಬಂದಿದೆ. ಈ ದಾಳಿಗೆ ಒಳಗಾದ ಜೈಲರ್ ಸೇರಿದಂತೆ ನಾಲ್ವರನ್ನು ತಕ್ಷಣವೇ ಕಾರವಾರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ಹೀಗಿದೆ:
ಮಂಗಳೂರು ಮೂಲದ ಮೊಹಮ್ಮದ್ ಅಬ್ದುಲ್ ಫಯಾನ್ ಮತ್ತು ಕೌಶಿಕ್ ನಿಹಾಲ್ ಎಂಬ ಕೈದಿಗಳು ಘಟನೆಯ ಆರೋಪಿಗಳು. ಡಕಾಯತಿ ಸೇರಿ 12ಕ್ಕೂ ಹೆಚ್ಚು ಗಂಭೀರ ಅಪರಾಧಗಳಲ್ಲಿ ಭಾಗಿಯಾಗಿದ್ದ ಇವರಿಬ್ಬರನ್ನು, ಮಂಗಳೂರು ಜೈಲಿನ ಕೈದಿಗಳ ಅಧಿಕ ಸಂಖ್ಯೆಯನ್ನು ಮನಗಂಡು, ಸುರಕ್ಷತಾ ಕಾರಣಗಳಿಂದ ಎರಡು ತಿಂಗಳ ಹಿಂದೆ ಕಾರವಾರ ಕಾರಾಗೃಹಕ್ಕೆ ವರ್ಗಾವಣೆ ಮಾಡಲಾಗಿತ್ತು.
ಜೈಲಿನ ಒಳಗೆ ಮಾದಕ ವಸ್ತುಗಳ ಪೂರೈಕೆಯನ್ನು ಸಿಬ್ಬಂದಿ ನಿಷೇಧಿಸಿದ ಹಿನ್ನೆಲೆಯಲ್ಲಿ ಇಬ್ಬರೂ ಕೈದಿಗಳು ಆಕ್ರೋಶಗೊಂಡು, ಜೈಲರ್ ಹಾಗೂ ಸಿಬ್ಬಂದಿಗಳ ಮೇಲೆ ಕಲ್ಲು-ಕೋಲುಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಎಸ್ಪಿ ದೀಪನ್ ಎಂ.ಎನ್ ಪ್ರತಿಕ್ರಿಯೆ:
ಘಟನೆಯ ಕುರಿತು ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್ ಅವರು,
“ಆರೋಪಿ ಮೊಹಮ್ಮದ್ ಅಬ್ದುಲ್ ಫಯಾನ್ ವಿರುದ್ಧ ಈಗಾಗಲೇ 13 ಪ್ರಕರಣಗಳಿವೆ. ಕೌಶಿಕ್ ನಿಹಾಲ್ ವಿರುದ್ಧ ಸಹ 4 ಪ್ರಕರಣಗಳು ದಾಖಲಾಗಿವೆ. ಜೈಲಿನಲ್ಲಿ ದಾಂಧಲೆ ನಡೆಸಿದ ಪ್ರಕರಣದ ಬಗ್ಗೆ ಹೊಸ FIR ದಾಖಲಿಸಲಾಗಿದೆ. ಜಿಲ್ಲೆಯೊಳಗಿನ ಮಾದಕ ವಸ್ತು ಸಾಗಾಟ ಜಾಲದ ಮೇಲೂ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ,” ಎಂದು ತಿಳಿಸಿದ್ದಾರೆ.
ಜಿಲ್ಲಾ ಕಾರಾಗೃಹದ ಭದ್ರತಾ ವ್ಯವಸ್ಥೆ, ಕೈದಿಗಳ ನಿಗಾವ್ಯವಸ್ಥೆ ಮತ್ತು ಮಾದಕ ವಸ್ತುಗಳ ರವಾನೆ ಜಾಲ ಕುರಿತು ಈಗ ಗಂಭೀರ ಚರ್ಚೆ ನಡೆಯುತ್ತಿದೆ. ಈ ಘಟನೆ ಜೈಲಿನ ಒಳಗಿನ ಭದ್ರತಾ ದೌರ್ಬಲ್ಯವನ್ನು ಮತ್ತೊಮ್ಮೆ ಬಯಲುಗೊಳಿಸಿದೆ.
ವರದಿ. ಶಶಿಕಾಂತ್ ಕೊರವರ




