ಅನೈತಿಕ ಸಂಬಂಧದ ಕಲಹ: ಮಹಿಳೆಯ ಕುಟುಂಬಸ್ಥರ ಹಲ್ಲೆಗೆ ಎಂಜಿನಿಯರ್ ಬಲಿ
ಹುಬ್ಬಳ್ಳಿ: ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಎಂಜಿನಿಯರ್ ಹತ್ಯೆ – ಮೂವರು ಬಂಧನ
ಹುಬ್ಬಳ್ಳಿ, ಜನವರಿ 12:
ಮಹಿಳೆಯೊಂದಿಗಿನ ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಆಕೆಯ ಕುಟುಂಬಸ್ಥರಿಂದ ಗಂಭೀರ ಹಲ್ಲೆಗೆ ಒಳಗಾಗಿದ್ದ ಹುಬ್ಬಳ್ಳಿ ಕಾನೂನು ವಿಶ್ವವಿದ್ಯಾಲಯದಲ್ಲಿ ಗುತ್ತಿಗೆ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ವಿಠಲ್ ರಾಠೋಡ್ (60) ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಡಿ.10ರಂದು ನಡೆದ ಹಲ್ಲೆ ಪ್ರಕರಣವನ್ನು ಅಪಘಾತವೆಂದು ನಾಟಕವಾಡಿ ಮುಚ್ಚಿಹಾಕಲು ಆರೋಪಿಗಳು ಯತ್ನಿಸಿದ್ದರು. ಆದರೆ ನವನಗರ ಠಾಣೆ ಪೊಲೀಸರ ತನಿಖೆಯಲ್ಲಿ ಸತ್ಯ ಬೆಳಕಿಗೆ ಬಂದಿದೆ.
ಪ್ರಕರಣ ಸಂಬಂಧ ಮೇಘವ್ ಮತ್ತು ಭಗವಾನದಾಸ್ ಸೇರಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ವಿಠಲ್ ರಾಠೋಡ್ ಬಳಿ ಕಳೆದ 4–5 ವರ್ಷಗಳಿಂದ ಛತ್ತೀಸ್‌ಗಢ ಮೂಲದ ಕುಟುಂಬವೊಂದು ಕೆಲಸ ಮಾಡುತ್ತಿದ್ದು, ಆ ಕುಟುಂಬದ ಮಹಿಳೆ ವಿಮಾಲ ಜೊತೆ ವಿಠಲ್ ಅನೈತಿಕ ಸಂಬಂಧ ಹೊಂದಿದ್ದ ಎಂದು ತಿಳಿದುಬಂದಿದೆ.
ಈ ವಿಚಾರಕ್ಕೆ ಸಂಬಂಧಿಸಿ ಹಲವಾರು ಬಾರಿ ಜಗಳ ನಡೆದಿದ್ದು, ಜನವರಿ 10ರ ರಾತ್ರಿ ಮತ್ತೆ ಗಲಾಟೆಯಾಗಿತ್ತು.
ಆ ವೇಳೆ ಆರೋಪಿಗಳು ವಿಠಲ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಮದ್ಯ ಸೇವಿಸಿ ಬಿದ್ದಿದ್ದರಿಂದ ಗಾಯಗಳಾಗಿವೆ ಎಂದು ಸುಳ್ಳು ಹೇಳಿಕೆ ನೀಡಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ವಿಠಲ್ ಅವರನ್ನು ಧಾರವಾಡದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಘಟನೆ ಸಂಬಂಧ ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.
ವರದಿ. ಶಶಿಕಾಂತ ಕೊರವರ




