Uncategorizedಕಥೆ/ಕವನಜಿಲ್ಲೆಸಂಸ್ಕೃತಿ

ಮುಂಡಗೋಡದಲ್ಲಿ 57 ದಿನಗಳ ದಲಾಯಿ ಲಾಮಾ ವಾಸ್ತವ್ಯ ಅಂತ್ಯ

ಮುಂಡಗೋಡ: ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನ ಟಿಬೆಟಿಯನ್ ಶರಣಾರ್ಥಿ ಶಿಬಿರದಲ್ಲಿ ಕಳೆದ ಸುಮಾರು ಎರಡು ತಿಂಗಳ ಕಾಲ ವಾಸ್ತವ್ಯ ಹೂಡಿದ್ದ ಟಿಬೆಟಿಯನ್ನರ ಪರಮೋಚ್ಚ ಧರ್ಮಗುರು ಹಾಗೂ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಹಿಸ್ ಹೋಲಿನೆಸ್ 14ನೇ ದಲಾಯಿ ಲಾಮಾ ಅವರು ಫೆಬ್ರವರಿ 9ರಂದು ಮುಂಡಗೋಡಿನಿಂದ ನಿರ್ಗಮಿಸಲಿದ್ದಾರೆ.

ಡಿಸೆಂಬರ್ 12ರಂದು ಮುಂಡಗೋಡಿಗೆ ಆಗಮಿಸಿದ್ದ ದಲಾಯಿ ಲಾಮಾ ಅವರು, ಕ್ಯಾಂಪ್ ನಂಬರ್–6ರ ಡ್ರೆಪುಂಗ್ ಗೊಮಾಂಗ್ ಮಠದಲ್ಲಿ ಸತತ 57 ದಿನಗಳ ಕಾಲ ತಂಗಿದ್ದರು. ಈ ಅವಧಿಯಲ್ಲಿ ಅವರು ವಿವಿಧ ಧಾರ್ಮಿಕ ಪೂಜೆ–ಪುನಸ್ಕಾರಗಳು, ಆಧ್ಯಾತ್ಮಿಕ ಉಪನ್ಯಾಸಗಳನ್ನು ನಡೆಸಿಕೊಟ್ಟಿದ್ದು, ಅನುಮತಿ ಪಡೆದ ನೂರಾರು ಭಕ್ತರಿಗೆ ಆಶೀರ್ವಾದ ನೀಡುವ ಮೂಲಕ ಭಕ್ತ ಸಮುದಾಯದಲ್ಲಿ ಅಪಾರ ಸಂತಸ ಮೂಡಿಸಿದ್ದರು.

ವಾಸ್ತವ್ಯದ ಮಧ್ಯೆ ಗ್ರಾಮಿ ಗೌರವ

ದಲಾಯಿ ಲಾಮಾ ಅವರು ಮುಂಡಗೋಡಿನಲ್ಲಿ ವಾಸ್ತವ್ಯ ಹೂಡಿದ್ದ ಸಮಯದಲ್ಲೇ ಜಗತ್ತಿನ ಪ್ರತಿಷ್ಠಿತ ಗ್ರಾಮಿ ಪ್ರಶಸ್ತಿಗೆ ಭಾಜನರಾಗಿರುವುದು ಈ ಬಾರಿಯ ಭೇಟಿಯ ವಿಶೇಷವೆನಿಸಿದೆ. ವಿಶ್ವ ಶಾಂತಿಗಾಗಿ ಅವರು ನೀಡುತ್ತಿರುವ ಅನನ್ಯ ಸೇವೆಗೆ ಸಂದ ಈ ಗೌರವವು ಮುಂಡಗೋಡಿನ ನೆಲಕ್ಕೂ ವಿಶೇಷ ಗೌರವ ತಂದಿದೆ. ಈ ಹಿನ್ನೆಲೆಯಲ್ಲಿ ಟಿಬೆಟಿಯನ್ ಶರಣಾರ್ಥಿ ಶಿಬಿರದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು.

ಪ್ರಯಾಣ ವೇಳಾಪಟ್ಟಿ

ಫೆಬ್ರವರಿ 9ರಂದು ಮುಂಡಗೋಡಿನಿಂದ ಹೊರಡಲಿರುವ ದಲಾಯಿ ಲಾಮಾ ಅವರು, ಫೆಬ್ರವರಿ 13ರಂದು ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿರುವ ತಮ್ಮ ಕೇಂದ್ರ ಕಚೇರಿಗೆ ತಲುಪಲಿದ್ದಾರೆ ಎಂದು ತಿಳಿದುಬಂದಿದೆ.

ವಿಶ್ವ ಶಾಂತಿಯ ದೂತರಾದ ದಲಾಯಿ ಲಾಮಾ ಅವರ ಎರಡು ತಿಂಗಳ ಸುದೀರ್ಘ ವಾಸ್ತವ್ಯದಿಂದ ಮುಂಡಗೋಡಿನ ನೆಲ ಪವಿತ್ರವಾಗಿದೆ ಎಂದು ಸ್ಥಳೀಯರು ಹಾಗೂ ಅನುಯಾಯಿಗಳು ಭಾವಪೂರ್ಣವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಐತಿಹಾಸಿಕ ಭೇಟಿ ಮುಂಡಗೋಡಿನ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲಾಗಿ ಉಳಿಯಲಿದೆ ಎನ್ನಲಾಗಿದೆ.

ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
0
+1
0
+1
0
+1
0
+1
0
+1
0
+1
0

Related Articles

Leave a Reply

Your email address will not be published. Required fields are marked *

Back to top button