ಹುಬ್ಬಳ್ಳಿ ಜನರಿಗೆ ಸಿಹಿ ಸುದ್ದಿ ನೀಡಿದ ಎಲ್.ಆ್ಯಂಡ್ ಟಿ ಕಂಪನಿ..!
ಹುಬ್ಬಳ್ಳಿ: ನಗರದಲ್ಲಿ ಹಲವಾರು ವರ್ಷಗಳಿಂದ ಜೀವಜಲ ಅನಾವಶ್ಯಕ ಕಾರಣದಿಂದ ವ್ಯರ್ಥವಾಗಿ ಹರಿದು ಹೋಗುತ್ತಿತ್ತು. ಈ ನಿಟ್ಟಿನಲ್ಲಿ ಹು-ಧಾ ಮಹಾನಗರ ಪಾಲಿಕೆ ಹೊಸ ಯೋಜನೆಯೊಂದನ್ನು ರೂಪಿಸಿ, ಹಳೆಯ ಪೈಪ್ ಲೈನ್ ಬದಲಾಯಿಸಿ ಹೊಸ ಪೈಪ್ ಲೈನ್ ಅಳವಡಿಸುವ ಕಾರ್ಯಕ್ಕೆ ಸೂಚನೆ ನೀಡಿತ್ತು. ಅದರಂತೆ ಎಲ್ ಆ್ಯಂಡ್ ಟಿ ಕಂಪನಿ ಸರಿಸುಮಾರು 20 ವಾರ್ಡ್’ಗಳ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೊಸ ಪೈಪ್ ಲೈನ್ ಕಾರ್ಯ ಪೂರ್ಣಗೊಳಿಸಿದ್ದು, ಇಂದು ಹೊಸ ಪೈಪ್ ಲೈನ್’ನಿಂದ ನೀರು ಸರಬರಾಜು ಕಾರ್ಯಕ್ಕೆ ಚಾಲನೆ ನೀಡಲಾಯಿತು.
ನಗರದ ನೃಪತುಂಗ ಬೆಟ್ಟದ ಬಳಿಯ ಮುಖ್ಯ ವಾಟರ್ ಟ್ಯಾಂಕ್ ಬಳಿಯಲ್ಲಿ ಕೆಯುಐಡಿಎಫ್’ಸಿ ಅಧಿಕ್ಷೀಕ ಅಭಿಯಂತರರಾದ ಎಸ್.ತಿಪ್ಪಮ್ಮ ಅವರ ನೇತೃತ್ವದಲ್ಲಿ ಪಾಲಿಕೆ ಸದಸ್ಯ ಸಂತೋಷ ಚೌಹಾನ್, ಮಾಜಿ ಪಾಲಿಕೆ ಸದಸ್ಯ ಸಿದ್ದು ಮೊಗಳಿಶೆಟ್ಟರ್ ಅವರು ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಕಳೆದ 40 ವರ್ಷಗಳಿಂದ ಪೈಪ್ ಲೈನ್ ದುರಸ್ತಿ ಕಾರ್ಯ ಮಾಡಿದಿಲ್ಲ, ಇದರಿಂದ ಅನೇಕ ನೀರಿನ ಪೈಪ್ ಸಾಮರ್ಥ್ಯ ಕಳೆದುಕೊಂಡು ಎಲ್ಲೆಂದರಲ್ಲಿ ನೀರು ಪೋಲಾಗುವುದು ಸರ್ವೇಸಾಮಾನ್ಯವಾಗಿತ್ತು. ಈ ನಿಟ್ಟಿನಲ್ಲಿ ಎಲ್ ಆ್ಯಂಡ್ ಟಿ ಕಂಪನಿ 864mm ಡಯಾ ಪೈಪ್ ಅಳವಡಿಸುವ ಮೂಲಕ ಮುಂದಿನ ಹತ್ತಾರು ವರ್ಷಗಳಿಗೂ ಅನುಕೂಲವಾಗುವಂತೆ ಕಾರ್ಯ ಮಾಡಿ ಮುಗಿಸಿದೆ.
ನೃಪತುಂಗ ಬೆಟ್ಟದಿಂದ ದೋಬಿಘಾಟ್’ವರೆಗೆ ನೂತನ ಪೈಪ್ ಲೈನ್ ಅಳವಡಿಸಲಾಗಿದೆ. ಈ ಕಾರ್ಯದಿಂದ ಕೇಶ್ವಾಪುರ, ತಬೀಬಲ್ಯಾಂಡ್, ಮ್ಯಾದಾರ ಓಣಿ, ಸೋನಿಯಾಗಾಂಧಿ ನಗರ, ಗಬ್ಬೂರ ವರೆಗಿನ ಜನರಿಗೆ ಅನುಕೂಲವಾಗಲಿದೆ. ಈಗಾಗಲೇ ಟೆಸ್ಟಿಂಗ್ ಕಾರ್ಯ ಕೂಡ ಮುಗಿದಿದೆ.
ಎಲ್ ಆ್ಯಂಡ್ ಟಿ ತನ್ನ ಕಾಮಗಾರಿ ನಡೆಸುವಾಗ ಅನೇಕ ಸವಾಲುಗಳು ಎದುರಾದವು, ಅವುಗಳನ್ನು ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳ ಸಹಕಾರ, ಮಾರ್ಗದರ್ಶನದಲ್ಲಿ ಪರಿಹರಿಸಿಕೊಂಡು ನಗರದ ಜನತೆಗೆ ನೀರು ನಿರಂತರವಾಗಿ ದೊರೆಯುವಂತೆ ಮಾಡಿದೆ.
ಉದ್ಘಾಟನಾ ಸಮಾರಂಭದಲ್ಲಿ ಎಲ್ ಆಂಡ್ ಟಿ ಕಂಪನಿಯ ಸಿಬ್ಬಂದಿಗಳು, ಸ್ಥಳೀಯ ಮುಖಂಡರು, ಸಾರ್ವಜನಿಕರು ಇನ್ನಿತರರು ಉಪಸ್ಥಿತರಿದ್ದರು.