ಹುಬ್ಬಳ್ಳಿ : ಬೆಂಗಳೂರಿನ ಚಂದ್ರು ಹತ್ಯೆ ಹಿನ್ನೆಲೆಯಲ್ಲಿ ಗೃಹ ಸಚಿವರಾದ ಅರಗ ಜ್ಞಾನೇಂದ್ರ ಹಾಗೂ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ ಕೋಮುಗಲಭೆಗೆ ಪ್ರಚೋದನಾತ್ಮಕ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಧಾರವಾಡ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.
ಬೆಂಗಳೂರಿನ ಜೆ.ಜೆ. ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಏಪ್ರಿಲ್ 6 ರಂದು ಚಂದ್ರು ಎಂಬ ಯುವಕನ ಹತ್ಯೆಯಾಗಿದ್ದು, ಘಟನಾ ನಂತರ ಪೊಲೀಸ್ ಆಯುಕ್ತರೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಬೈಕ್ ಅಪಘಾತದಿಂದ ಉಂಟಾದ ಜಗಳವೆ ಹತ್ಯೆಗೆ ಕಾರಣವೆಂದು ತಿಳಿಸಿದರೂ ಕೂಡಾ ಗೃಹ ಸಚಿವ ಅರಗ ಜ್ಞಾನೇಂದ್ರ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಉರ್ದು ಮಾತನಾಡಲು ಬರದಿದ್ದಕ್ಕೆ ಅಮಾನುಷವಾಗಿ ಕೊಲೆ ಮಾಡಲಾಗಿದೆ. ಕೇವಲ ಕನ್ನಡ ಮಾತನಾಡಿದ ಎಂಬ ಕಾರಣಕೋಸ್ಕರ ಹತ್ಯೆ ಮಾಡಲಾಗಿದೆ ಎಂದು ಹೇಳಿಕೆ ನೀಡಿ ರಾಜ್ಯದಲ್ಲಿ ಅಶಾಂತಿ ನಿರ್ಮಾಣಕ್ಕೆ ಪ್ರಚೋದನೆ ನೀಡುವ ಹೇಳಿಕೆ ನೀಡಿದ್ದಾರೆ. ಇದು ಖಂಡನೀಯ ಕೂಡಲೇ ಪ್ರಚೋದನಾತ್ಮಕ ಹೇಳಿಕೆ ನೀಡಿರುವ ಮುಖಂಡರ ಮೇಲೆ ಎಫ್.ಆರ್.ಐ ದಾಖಲಿಸಬೇಕೆಂದು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕಾಂಗ್ರೇಸೀಗರು ಒತ್ತಾಯಿಸಿದರು.
ದೂರು ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಧಾರವಾಡ ಗ್ರಾಮೀಣ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಅನಿಲಕುಮಾರ್ ಪಾಟೀಲ್, ರಾಜ್ಯದಲ್ಲಿ ಇತ್ತಿಚೆಗೆ ಯಾವುದೇ ಘಟನೆಗಳು ಸಂಭವಿಸಿದರೇ ಅದನ್ನು ಬಿಜೆಪಿ ಹೇಗೆ ಧಾರ್ಮಿಕ ಬಣ್ಣ ಹಚ್ಚಬೇಕು ಎಂಬುದನ್ನು ನೋಡುತ್ತಿದೆ. ಈಗಾಗಲೇ ಚಂದ್ರು ಹತ್ಯೆ ಕುರಿತು ದೂರು ದಾಖಲಾಗಿದ್ದು, ಅದರಲ್ಲಿ ಬೈಕ್ ಅಪಘಾತದಿಂದ ಉಂಟಾದ ಜಗಳವೇ ಕೊಲೆಗೆ ಕಾರಣವೆಂದು ತಿಳಿಸಲಾಗಿದೆ. ಆದರೂ ಕೂಡಾ ಬಿಜೆಪಿ ಇದಕ್ಕೆ ಜಾತಿಯತೆ ಬಣ್ಣ ಬಳೆಯಲು ಮುಂದಾಗಿರುವುದು ಖಂಡನೀಯವಾಗಿದೆ. ಬಿಜೆಪಿ ಆಡಳಿತದಲ್ಲಿ ಸಂಪೂರ್ಣ ವಿಫಲವಾಗಿದೆ. ಈ ಕಾರಣದಿಂದ ಮುಂಬರುವ ಚುನಾವಣೆಯಲ್ಲಿ ಮತಗಳನ್ನು ಹಿಂದುತ್ವದ ಮೂಲಕ ಹೆಚ್ಚು ಮತಗಳನ್ನು ಗಳಿಸುವ ಹುನ್ನಾರ ಮಾಡುತ್ತಿದೆ ಎಂದು ದೂರಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ, ಗ್ರಾಮೀಣ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನೋದ್ ಅಸೂಟಿ, ನಾಗರಾಜ ಹೆಗ್ಗಣ್ಣವರ, ರವಿ ಕಲ್ಯಾಣಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.