ಹುಬ್ಬಳ್ಳಿ: ಎಸ್.ಎಸ್.ಎಲ್. ಸಿ ಪರೀಕ್ಷೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಶಿಕ್ಷಣ ಇಲಾಖೆ, ಗೃಹ ಇಲಾಖೆ ಎಲ್ಲ ತಯಾರಿ ಮಾಡಿದೆ. ಮಕ್ಕಳ ಹಿತದೃಷ್ಟಿಯಿಂದ ಸರಳವಾದ ಪರೀಕ್ಷೆ ಮಾಡಬೇಕೆಂದು ಈಗಾಗಲೇ ತಿಳಿಸಿದ್ದು, ಅದರಂತೆ ಮಕ್ಕಳು ತಮ್ಮ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಯಾವುದೇ ಆತಂಕವಿಲ್ಲದೇ ಮುಕ್ತವಾಗಿ, ಧೈರ್ಯವಾಗಿ ಪರೀಕ್ಷೆ ಎದುರಿಸಬೇಕೆಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರುವ 30 ನೇ ತಾರೀಖಿಗೆ ಬಕೆಟ್ ಅಧಿವೇಶನ ಮುಗಿಯುತ್ತಿದ್ದು, ಈಗಾಗಲೇ ಘೋಷಣೆ ಮಾಡಿದ ಕಾಮಗಾರಿಗಳು ಅನುಷ್ಠಾನ ಆಗಬೇಕೆಂದು ಸೂಚನೆ ನೀಡಿದ್ದೇನೆ. ಎಪ್ರಿಲ್ 30 ರೊಳಗೆ ಎಲ್ಲ ಕಾರ್ಯಾದೇಶವನ್ನು ನೀಡಲಿದ್ದೇನೆ. ಅದರ ಜೊತೆಗೆ ಅನುಷ್ಠಾನ, ಹಣಕಾಸಿನ ನೆರವು ಸರಿಯಾದ ರೀತಿಯಾಗಿ ನಡೆಯಬೇಕು ಎಂಬ ದೃಷ್ಟಿಯಿಂದ ಚೀಫ್ ಸೆಕ್ರೆಟರಿ ನೇತೃತ್ವದಲ್ಲಿ ಸಮಿತಿ ಮಾಡುವ ಹೇಳಿಕೆ ನೀಡಲಾಗಿತ್ತು. ಅದರಂತೆ ನಾಳೆ ಒಂದು ಆದೇಶ ಮಾಡಲಿದ್ದೇನೆ ಎಂದರು.
ಅಂತರರಾಜ್ಯ ಜಲವಿವಾದ ಇತ್ಯರ್ಥಕ್ಕೆ ಕ್ರಮ: ಅಭಿವೃದ್ಧಿ ಕಾರ್ಯಗಳ ಜೊತೆಗೆ ನನ್ನ ಮುಖ್ಯವಾದ ಕೆಲಸಗಳು ಅಂತರರಾಜ್ಯ ಜಲವಿವಾದಗಳನ್ನು ಶೀಘ್ರವಾಗಿ ಬಗೆಹರಿಸುವುದು, ಕಾನೂನಾತ್ಮಕ ವಿಚಾರಗಳನ್ನು ಜಲವಿವಾದ ನೇತೃತ್ವದ ವಹಿಸಿರುವ ವಕೀಲರೊಂದಿಗೆ ಚರ್ಚೆ ಮಾಡಿ ಕೂಡಲೇ ಜಲವಿವಾದಕ್ಕೆ ಪರಿಹಾರ ಕಂಡುಕೊಳ್ಳುವುದು. ಇದರ ಜೊತೆಗೆ ಕೇಂದ್ರದಿಂದ ಅನುಮತಿ ಪಡೆದುಕೊಳ್ಳಲು ಇಲಾಖೆಗೆ ಸಿದ್ದತೆ ಮಾಡಲು ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ತಿಂಗಳು ಮೊದಲ ವಾರದಲ್ಲಿ ಕೇಂದ್ರದ ಜಲಶಕ್ತಿಸಚಿವರನ್ನು ಭೇಟಿಯಾಗಿ ಚರ್ಚೆಸುವೆ ಎಂದರು.