ಹುಬ್ಬಳ್ಳಿ: ಸತ್ತವರ ಹೆಸರಿನಲ್ಲಿ ಜಾಗ ಖರೀದಿ ಮಾಡಿದಲ್ಲದೇ, ಅದನ್ನು ಮಾರಾಟ ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಮೊದಲೇ ಇತ್ತಿಚೀನ ಕಾಲದಲ್ಲಿ ಜೀವನ ನಡೆಸೋದೆ ಕಷ್ಟ. ಅಂತದ್ರಲ್ಲಿ ಜಾಗ ಹಿಡಿದು ಮನೆ ಕಟ್ಟಬೇಕು ಅಂದ್ರೆ ದೂರದ ಮಾತು. ಹೀಗಿರುವಾಗ ಕಷ್ಟಪಟ್ಟು ದುಡಿದು ಅಲ್ಪಸ್ವಲ್ಪ ಹಣ ಉಳಿಸಿ ಮನೆ ಮಾಡಿಕೊಂಡರಾಯ್ತು ಅಂತಾ ಕಷ್ಟಪಟ್ಟು ಜಾಗ ಹಿಡಿದ್ರೆ, ಅದನ್ನು ಕಾಣದ ಕೈಗಳು ಮಾತ್ರ ಲಪಟಾಯಿಸುತ್ತಿವೆ.
ಹೌದು, ಇಂತಹದೊಂದು ದೊಡ್ಡ ಅಕ್ರಮ ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿದ್ದು, ಸ್ವತಃ ಹುಡಾ ಅಧ್ಯಕ್ಷರೇ ಬೆಚ್ಚಿ ಬಿದ್ದಿದ್ದಾರೆ.
ಅಂದ ಹಾಗೇ ಹುಡಾ ಮನೆಯಿಲ್ಲದ ಬಡವರಿಗಾಗಿ ನಗರದ ಹೊರವಲಯದಲ್ಲಿ ರೈತರಿಂದ ಜಾಗ ಖರೀದಿಸಿ ಅದನ್ನು ಅಭಿವೃದ್ಧಿಪಡಿಸಿ ಮಾರಾಟ ಮಾಡುತ್ತದೆ.
ಹೀಗೆ ಹುಬ್ಬಳ್ಳಿ ತಾಲೂಕಿನ ರಾಯನಾಳ ಗ್ರಾಮದಲ್ಲಿ ಲೇಟೌಟ್ ನಿರ್ಮಿಸಿ ಜಾಗವನ್ನು ಮಾರಾಟ ಮಾಡಿದೆ. ಆದರೆ ಖರೀದಿ ಮಾಡಿಕೊಂಡರ ಬೇಜವಾಬ್ದಾರಿಯೋ? ಅಧಿಕಾರಿಗಳ ಬೇಜವಾಬ್ದಾರಿಯೋ? ಗೊತ್ತಿಲ್ಲ.
ಮೂಲ ಮಾಲೀಕರು ಮರಣ ಹೊಂದಿ ಕೆಲವು ವರ್ಷಗಳಾದರೂ ಸಹಿತ ಈವರೆಗೆ ಜಾಗ ಅವರ ಹೆಸರಿಗೆ ನೊಂದಣಿಯಾಗಿಲ್ಲ.
ಇದನ್ನೇ ಬಂಡವಾಳ ಮಾಡಿಕೊಂಡ ಕೆಲವು ಕಾಣದ ಕೈಗಳು ಅಧಿಕಾರಿಗಳ ಮೀಲಾಮಿಯಿಂದ ಈ ಜಾಗವನ್ನು ಅಕ್ರಮವಾಗಿ ಸತ್ತು ಸ್ವರ್ಗದಲ್ಲಿರುವವರ ಹೆಸರಿಗೆ ಮಾಡಿಸಿದ್ದಾರೆ.
ಮೊದಲೇ ಸರಿಯಾದ ದಾಖಲೆಗಳು ಇದ್ದರೂ ಸಹಿತ ಅಧಿಕಾರಿಗಳು ಕೆಲಸ ಮಾಡಿಕೊಡಲು ಆ ದಾಖಲೆಯಿಲ್ಲ, ಈ ದಾಖಲೆಯಿಲ್ಲ, ಅವರ ಸಹಿಯಿಲ್ಲ ಎಂದು ಅಲೆದಾಡಿಸುತ್ತಾರೆ.
ಆದರೆ ಸತ್ತು ದಶಕವಾದರೂ ಸಹಿತ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಕಾಗದ ಮಾಡುವಾಗ ಅವರನ್ನು ಕರೆಯಿಸಿ ಫೋಟೋ ಹೊಡೆಸಿ, ಸಹಿ ಮಾಡಿಸಿದ್ದಾರೆ ಎಂದ್ರೆ ನೀವು ನಂಬಲೇಬೇಕು.
ಒಂದು ಕಡೆಗೆ ಹುಡಾದಲ್ಲಿ ಮೂಲ ಮಾಲೀಕರ ಮೃತ್ಯುಪತ್ರ ದಾಖಲಾಗಿದೆ. ಆದರೆ ಮತ್ತೊಂದೆಡೆ ಅದೇ ಮೃತ್ಯವಾದ ವ್ಯಕ್ತಿ ಸಬ್ ರಿಜಿಸ್ಟರ್ ಕಚೇರಿಗೆ ಬಂದು ಸಹಿ ಮಾಡಿ ಜಾಗವನ್ನು ತಮ್ಮ ಹೆಸರಿಗೆ ಮಾಡಿಸಿಕೊಂಡಿದ್ದಾರೆ. ಅಲ್ಲದೇ ಜಾಗವನ್ನೆ ಇಬ್ಬೊಬ್ಬರಿಗೆ ಮಾರಾಟ ಮಾಡಿದ್ದಾರೆ. ಇಷ್ಟೊಂದು ಅಕ್ರವಾದರೂ ಸಹಿತ ಹುಡಾ ಆಯುಕ್ತರಿಗೆ ಮತ್ತು ಸಬ್ ರಿಜಿಸ್ಟರ್ ಕಚೇರಿಯ ಉಪನೊಂದಣಿ ಅಧಿಕಾರಿಗಳಿಗೆ ಮಾತ್ರ ಗೊತ್ತೆ ಇಲ್ಲವಂತೆ.
ಈ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡುತ್ತಿದ್ದಂತೆ ನಿಮ್ಮ ದಿನವಾಣಿ ಸಬ್ ರಿಜಿಸ್ಟರ್ ಕಚೇರಿಗೆ ತೆರಳಿ ಪ್ರಶ್ನೆ ಮಾಡಿದಾಗ ಇದು ನಮ್ಮ ತಪ್ಪಲ್ಲ, ಮೊದಲೇ ನೂರಾರು ಕೆಲಸ ಇರುತ್ತವೆ. ಹುಡಾ ಆಯುಕ್ತರೇ ನಮಗೆ ಪತ್ರ ಹಾಗೂ ಆಧಾರ ಕಾರ್ಡ್ ಕೊಟ್ಟಿದ್ದಾರೆ. ಹೀಗಾಗಿ ಸರ್ಕಾರಿ ಅಧಿಕಾರಿಯ ಮೇಲಿನ ನಂಬಿಕೆಯಿಂದ ಕಾಗದ ಮಾಡಿಕೊಟ್ಟಿದ್ದೇವೆ. ಇದರಲ್ಲಿ ನಮ್ಮ ತಪ್ಪೇನು ಇಲ್ಲ. ಎಲ್ಲವೂ ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದವರ ತಪ್ಪು ಎನ್ನುತ್ತಾರೆ ಉಪನೊಂದಣಿ ಅಧಿಕಾರಿ ದೀಪಕ್.
ಅದರಂತೆ ಹುಡಾ ಆಯುಕ್ತ ಸಂತೋಷ ಬಿರಾದಾರ ಅವರನ್ನು ಪ್ರಶ್ನೆ ಮಾಡಿದ್ರೆ, ಇದು ನಮಗೆ ಗೊತ್ತಾಗಿಲ್ಲ. ಇದೀಗ ಗಮನಕ್ಕೆ ಬಂದಿದೆ. ಪರಿಶೀಲನೆ ಮಾಡುತ್ತೇವೆ ಎಂದು ಹೇಳಿ ಫೈಲ್ ನೋಡಿದಾಗ ಖೊಟ್ಟಿ ದಾಖಲೆ ಸೃಷ್ಟಿಯಾಗಿರುವುದು ಬೆಳಕಿಗೆ ಬಂದಿದೆ. ಆ ಬಳಿಕ ಇದರ ತನಿಖೆ ಕೈಗೊಂಡು ಅಧಿಕಾರಿಗಳಾಗಲಿ, ಸಿಬ್ಬಂದಿಗಳಾಲಿ ಅಥವಾ ಮಾಲೀಕರ ಸಂಬಂಧಿಗಳಾಗಲಿ ಯಾರೇ ತಪ್ಪು ಮಾಡಿದ್ರು ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳತ್ತೇವೆ ಎಂದು ಹೇಳತ್ತಾರೆ.
ಸಂತೋಷ ಬಿರಾದಾರ, ಆಯುಕ್ತರು, ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರ
ಇಷ್ಟೆಲ್ಲಾ ಬೆಳವಣಿಗೆ ಆಗುತ್ತಿದ್ದಂತೆ ಈ ವಿಷಯ ನೂತನ ಹುಡಾ ಅಧ್ಯಕ್ಷ ಶಾಕೀರ್ ಸನದಿ ಅವರ ಗಮನಕ್ಕೆ ಬಂದಿದ್ದು, ಇದೀಗ ಅವರೇ ಅಕ್ರಮ ನೋಡಿ ದಂಗಾಗಿ ಹೋಗಿದ್ದಾರೆ. ಇಷ್ಟೊಂದು ದೊಡ್ಡ ಅಕ್ರಮ ದೂರದ ಬೆಂಗಳೂರು ನಗರದಲ್ಲಿ ನಡೆದಿದ್ದು ನೋಡಿದ್ದೇವೆ. ಇದೀಗ ನಮ್ಮಲ್ಲಿಯೇ ಆಗಿದೆ ಎಂದರೆ ನಂಬಲು ಆಗುತ್ತಿಲ್ಲ. ಈಗಾಗಲೇ ಅಧಿಕಾರಿಗಳಿಗೆ ನೋಟೀಸ್ ನೀಡಿ ವಿವರಣೆ ಕೇಳಿದ್ದೇವೆ. ನಮ್ಮಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ಫೈಲ್ ಮಾತ್ರವಿದೆ. ಮತ್ತೊಂದು ಫೈಲ್ ಇಲ್ಲ. ಈಗಾಗಲೇ ಇದನ್ನು ಮಾಡಿಕೊಡಲು ಬರುವುದಿಲ್ಲ ಎಂದು ಹೇಳಲಾಗಿದೆ. ಆದರೂ ಸಹಿತ ದಾಖಲೆ ಸೃಷ್ಟಿಸಿ ಜಾಗ ನೊಂದಣಿಯಾಗಿದೆ. ಮೇಲ್ನೋಟಕ್ಕೆ ಅಕ್ರಮವಾಗಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ತನಿಖೆ ನಡೆಸಲಾಗುವುದು. ಅಷ್ಟೇ ಅಲ್ಲದೇ ಜಮೀನನ್ನು ಸರ್ಕಾರಕ್ಕೆ ಪುನಃ ಪಡೆದುಕೊಳ್ಳಲಾಗುವುದು. ಇದರಲ್ಲಿ ಯಾರೇ ತಪ್ಪು ಮಾಡಿದ್ರು ಅಂತವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.
ಶಾಕೀರ್ ಸನದಿ, ಅಧ್ಯಕ್ಷರು, ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರ
ಒಟ್ಟಿನಲ್ಲಿ ಸರ್ಕಾರಿ ಕಚೇರಿಗಳಲ್ಲಿ ಯಾವುದೇ ಒಂದು ದಾಖಲೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಬೇಕಾದರೆ ಅದರದೇ ನಿಯಮಗಳಿವೆ. ಆದರೆ ಈ ಪ್ರಕರಣದಲ್ಲಿ ಯಾವುದೇ ನಿಯಮ ಪಾಲನೆ ಆಗದೇ ಇರುವುದು ಬೆಳಕಿಗೆ ಬಂದಿದೆ. ಈಗಲಾದರೂ ಸಂಬಂಧಪಟ್ಟವರು ಎಚ್ಚೆತ್ತುಕೊಂಡು, ತಪ್ಪಿತಸ್ಥರಿಗೆ ತಕ್ಕಶಿಕ್ಷೆ ನೀಡಬೇಕು. ಅಲ್ಲಿಯವರೆಗೆ ನಿಮ್ಮ ದಿನವಾಣಿ ಸುದ್ದಿಯನ್ನು ಪ್ರಕಟಿಸುವ ಕಾರ್ಯ ಮಾಡಲಿದೆ.