
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿರೋಧ ಪಕ್ಷದ ಮಾಜಿ ನಾಯಕಿ ಹಾಗೂ ಹಾಲಿ ಕಾಂಗ್ರೆಸ್ ಪಾಲಿಕೆ ಸದಸ್ಯೆ ಸುವರ್ಣಾ ಕಲ್ಲಕುಂಟ್ಲ ಸೇರಿದಂತೆ ಒಟ್ಟು 11 ಜನರ ವಿರುದ್ಧ ಕೊಲೆ ಯತ್ನ, ಸಾರ್ವಜನಿಕ ಆಸ್ತಿ ನಾಶಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿ ಮಂಗಳವಾರ ತೀರ್ಪು ನೀಡಿದೆ.
ಹೌದು, ಹಳೇ ದ್ವೇಷದ ಹಿನ್ನೆಲೆಯಲ್ಲಿ 2010 ರ ಅಗಸ್ಟ್ 21 ರಂದು ಕೇಶ್ವಾಪುರದ ಗಾಂಧಿವಾಡದ ಶಂಷಾದ್ ಮುನಗೇಟಿ, ರೀನಾ ಲಾಜರಸ ದಮ್ಮು, ರುತ್ ಲಾಜರಸ ದಮ್ಮು, ಸ್ಯಾಮುಲೇಟ್ ಮುನಿಗೇಟಿ, ಪ್ರವೀಣಕುಮಾರ ವೇಲಂ, ಚಂದ್ರಕಲಾ ಮುನಿಗೇಟಿ, ದಿವ್ಯಾಕುಮಾರಿ ಮುನಗೇಟಿ, ದೇವರಾಜ ಮುನಿಗೇಟಿ, ದೇವಕುಮಾರಿ ಕಲ್ಲಕುಂಟ್ಲ, ಜಾಸ್ಮಿನ್ ಮುನಿಗೇಟಿ ಅವರ ಮನೆಗೆ ರಾತ್ರಿ ಏಕಾಏಕಿ ನುಗ್ಗಿ ಮಚ್ಚು, ರಾಡ್, ಬಡಿಗೆಯಿಂದ ಹಲ್ಲೆ ಮಾಡಲಾಗಿತ್ತು.
ಅಲ್ಲದೇ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಲಾಗಿತ್ತು. ಉದ್ದೇಶಪೂರ್ವಕವಾಗಿ ದೊಂಬಿ ಎಬ್ಬಿಸಲು ಗುಂಪು ಸಾಗುವ ಹಾದಿಯಲ್ಲಿನ ಬೀದಿದೀಪಗಳನ್ನು ಒಡೆದು ಹಾಕಲಾಗಿತ್ತು.
ಈ ಘಟನೆ ಕುರಿತು ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆಗ ಅಂದಿನ ಪೊಲೀಸ್ ಇನ್ಸ್ಪೆಕ್ಟರ್ ಗಳಾದ ಬಿ.ಟಿ.ಬದ್ನಿ, ಅಬ್ದುಲ್ ರಹಮಾನ್, ಬಿ.ಎನ್.ಅಂಬಿಗೇರ ಸಮಗ್ರ ತನಿಖೆ ನಡೆಸಿ ದೋಷಾರೋಪ ಪಟ್ಟಿಯನ್ನು ಕೋರ್ಟ್’ಗೆ ಸಲ್ಲಿಸಿದರು.
ಇದೀಗ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಿದೆ. ಅದರಲ್ಲಿ ಸುವರ್ಣ ಕಲ್ಲಕುಂಟ್ಲ, ಲಾಜರಸ್ ಲುಂಜಾಲ, ಸ್ಯಾಮಸಂಗ್ ಲುಂಜಾಲ, ಶಶಿಧರ ರಾಥೋಡ, ಸುಶಾ ಅಲಿಯಾಸ್ ಸುಶೆರಾಜ, ಮೆರಿಯಮ್ಮ ಲುಂಜಾಲ, ನಿರ್ಮಲಾ ಜಂಗಮ, ಯೋಗರಾಜ್ ಪೂಜಾರ, ರಾಜು ಕೊಂಡಯ್ಯ ಆರ್ಯ ಶಿಕ್ಷೆಗೆ ಗುರಿಯಾಗಿದ್ದಾರೆ.
ಇವರಿಗೆಲ್ಲ ಐಪಿಸಿ 307ರ ಅಡಿ 3 ವರ್ಷ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ, 326ರಡಿ 2 ವರ್ಷ ಶಿಕ್ಷೆ ಹಾಗೂ 5 ಸಾವಿರ ರೂ. ದಂಡ, 324ರಡಿ 2 ವರ್ಷ ಶಿಕ್ಷೆ ಹಾಗೂ 2 ಸಾವಿರ ರೂ. ದಂಡ, 323ರಡಿ 6 ತಿಂಗಳು ಶಿಕ್ಷೆ ಹಾಗೂ 2 ಸಾವಿರ ರೂ. ದಂಡ, 448ರಡಿ 6 ತಿಂಗಳು ಶಿಕ್ಷೆ ಹಾಗೂ 500 ರೂ. ದಂಡ, 506ರಡಿ 2 ವರ್ಷ ಶಿಕ್ಷೆ ಹಾಗೂ ಸಾವಿರ ರೂ. ದಂಡ, 143ರಡಿ 6 ತಿಂಗಳು ಶಿಕ್ಷೆ ಹಾಗೂ ದಂಡ ವಿಧಿಸಿದೆ. ತಂಡ ತುಂಬಲು ತಪ್ಪಿದ್ದಲ್ಲಿ ಸಾದಾ ಶಿಕ್ಷೆಯನ್ನೂ ಕೋರ್ಟ್ ವಿಧಿಸಿದೆ.
ಇಬ್ಬರು ಅಪರಾಧಿಗಳಾದ ಅಬ್ರಾಹಂ ಲುಂಜಾಲ ಹಾಗೂ ಶ್ರೀಧರ ರಾಥೋಡ ಮೃತಪಟ್ಟಿದ್ದು, ಶಬ್ಬಿರ ಶೇಖ್ ಎಂಬಾತ ತಲೆಮರೆಸಿಕೊಂಡಿದ್ದಾನೆ. ದಂಡದ ಮೊತ್ತ ಪೈಕಿ 50 ಸಾವಿರ ರೂ. ನಗದು ಪ್ರಮುಖ ಗಾಯಾಳುಗಳಿಗೆ ಹಾಗೂ ತಲಾ 25 ಸಾವಿರ ರೂ. ಉಳಿದ ಗಾಯಾಳುಗಳಿಗೆ ನೀಡಬೇಕು. ಹೆಚ್ಚಿನ ಪರಿಹಾರಕ್ಕಾಗಿ ಕಾನೂನು ಸೇವಾ ಪ್ರಾಧಿಕಾರಕ್ಕೆ ಶಿಫಾರಸು ಮಾಡಿ ನ್ಯಾಯಾಧೀಶ ಬಿ.ಪರಮೇಶ್ವರ ಪ್ರಸನ್ನ ಅವರು ತೀರ್ಪು ಕೊಟ್ಟಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ಪರ ಅಭಿಯೋಜಕಿಯಾಗಿದ್ದ ಗಿರಿಜಾ ತಮ್ಮಿನಾಳ ಭಾಗಶಃ ವಾದ ಮಾಡಿದ್ದರು. ಈಗಿನ ಸರ್ಕಾರಿ ಅಭಿಯೋಜಕ ಬಿ.ವಿ. ಪಾಟೀಲ ವಾದ . ಪೂರ್ಣಗೊಳಿಸಿದ್ದಾರೆ.