ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಐಟಿ ಅಧಿಕಾರಿಗಳಿಂದ ಬೃಹತ್ ದಾಳಿ ನಡೆದಿದ್ದು, ಉದ್ಯಮಿ ಹಾಗೂ ಬಂಗಾರದ ವ್ಯಾಪಾರಿ ಗಣೇಶ ಶೇಟ್ ಮನೆ, ಕಚೇರಿ, ಅಂಗಡಿ ಹಾಗೂ ಒಡೆತನದ ಹೊಟೆಲ್’ಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಲಾಗಿದೆ. ಸುಮಾರು 116 ಕ್ಕೂ ಹೆಚ್ಚು ಐಟಿ ಅಧಿಕಾರಿಗಳು ಈಗಾಗಲೇ ಸ್ಥಳದಲ್ಲಿ ಬೀಡುಬಿಟ್ಟು ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.
ಗಣೇಶ ಶೇಟ್ ಅವರ ಮೇಲೆ ತೆರಿಗೆ ವಂಚನೆ ಆರೋಪದ ಮೇಲೆಯೇ ಈ ದಾಳಿ ನಡೆದಿದೆ ಎನ್ನಲಾಗಿದೆ. ಹುಬ್ಬಳ್ಳಿಯ ಅಶೋಕ ನಗರದ ಅವರ ನಿವಾಸ ಹಾಗೂ ಒಡೆತನದ ಗಣೇಶಪೇಟೆಯ ಕೆಜಿಪಿ ಆಭರಣ ಮಳಿಗೆ, ಲ್ಯಾಮಿಂಗ್ಟನ್ ರಸ್ತೆಯ ಮಹದೇವಿ ಸೀಲ್ಕ್ಸ್ ಆ್ಯಂಡ್ ಸಾರೀಸ್, ಅಮರಗೋಳದ ರಾಯಲ್ ರಿಟ್ಜ್ ರೆಸಾರ್ಟ್, ಹೊಸಪೇಟೆಯ ತಾರಾ ಪ್ಯಾಲೇಸ್ ಸೇರಿದಂತೆ ಇನ್ನಿತರ ಅವರ ಒಡೆತನದ ವ್ಯಾಪಾರ ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ.
ಈ ವೇಳೆ ಮಹತ್ವದ ದಾಖಲೆ ಪತ್ರಗಳನ್ನು ವಶಕ್ಕೆ ಪಡೆದು ಐಟಿ ಅಧಿಕಾರಿಗಳು ಪರಿಶೀಲನೆ ಕಾರ್ಯ ಕೈಗೊಂಡಿದ್ದಾರೆ.
ಇನ್ನು ಕಳೆದ 10 ಗಂಟೆಗಳಿಂದ ಪರಿಶೀಲನೆ ಕಾರ್ಯ ನಡೆಯುತ್ತಿದ್ದು, ಆಸ್ತಿಗೂ, ಮೌಲ್ಯಕ್ಕೂ ವ್ಯತ್ಯಾಸ ಹಾಗೂ ತೆರಿಗೆ ಆದಾಯದಲ್ಲಿನ ವ್ಯತ್ಯಾಸದ ಬಗ್ಗೆ ಐಟಿ ಅಧಿಕಾರಿಗಳು ಲೆಕ್ಕ ಹಾಕುತ್ತಿದ್ದಾರೆ.