ರೈತರ ಅನುಕೂಲಕ್ಕೆ ಭೂಮಿ ಆ್ಯಪ್: ರಘುನಂದನ್
ಹುಬ್ಬಳ್ಳಿ: ಗ್ರಾಮೀಣ ಭಾಗದ ರೈತರಿಗೆ ಉತ್ತಮ ಗುಣಮಟ್ಟದ ಬೆಳೆ ಬೆಳೆಯಲು ಹಾಗೂ ಬೆಳೆದ ಬೆಳೆಗಳಿಗೆ ಉತ್ತಮ ದರ ನೀಡುವ ಉದ್ದೇಶದಿಂದ ಖರೀದಿದಾರರನ್ನು ಆಕರ್ಷಿಸಲು ಉದ್ದೇಶದಿಂದ ಭೂಮಿ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ರಘುನಂದನ್ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ ಕೃಷಿ ಪ್ರಧಾನ ರಾಷ್ಟ್ರವಾಗಿದ್ದು, ರೈತರು ಬೆಳೆಯುವ ಬೆಳೆಗಳ ನಿರ್ವಹಣೆ ಹಾಗೂ ಮಾರಾಟ ಮಾಡುವಲ್ಲಿ ವಿಫಲರಾಗುತ್ತಿದ್ದಾರೆ. ದರ ಸಮರದ ನಡುವೆ ದಲ್ಲಾಳಿಗಳ ಕಾಟದಿಂದ ರೈತರು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ದೊರೆಯುತ್ತಿಲ್ಲ. ಇದರಿಂದಾಗಿ ರೈತರಿಗೆ ಅನುಕೂಲಕರವಾಗುವ ನಿಟ್ಟಿನಲ್ಲಿ ರೈತನ ಯಶಸ್ಸೇ ನಮ್ಮ ಯಶಸ್ಸು ಎಂಬ ಧ್ಯೇಯದೊಂದಿಗೆ ಈ ಆ್ಯಪ್ ಅಭಿವೃದ್ಧಿ ಪಡಿಸಲಾಗಿದೆ ಎಂದರು.
ಈಗಾಗಲೇ ಆ್ಯಪ್ ನ್ನು ರೈತರಿಗೆ ಅನುಕೂಲವಾಗುವಂತೆ ಮೊಬೈಲ್ ಪ್ಲೇ ಸ್ಟೋರ್’ ನಲ್ಲಿ ಬಿಡುಗಡೆ ಮಾಡಲಾಗಿದೆ. ರೈತರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಸಾವಿರಾರು ರೈತರು ಆ್ಯಪ್ ನಲ್ಲಿ ನೋಂದಣಿ ಮಾಡಿಕೊಂಡು ಬೆಳೆಗಳು, ಹಾಗೂ ಬೆಲೆಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಾರೆ. ತರಕಾರಿ, ಕಾಳುಗಳು ಸೇರಿದಂತೆ ರೈತ ಬೆಳೆಯುವ ಎಲ್ಲ ದವಸ ಧಾನ್ಯಗಳ ಮಾಹಿತಿ ಈ ಆ್ಯಪ್ ನಲ್ಲಿ ಲಭ್ಯವಾಗಲಿದೆ. ದಿನದಿಂದ ದಿನಕ್ಕೆ ಬದಲಾಗುವ ಮಾರುಕಟ್ಟೆಯ ಬೆಲೆಯನ್ನು ತಿಳಿದುಕೊಳ್ಳಲು ಸಹಕಾರಿಯಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಹನುಮೇಶ ಯಾವಗಲ್ ಇದ್ದರು.