ಹುಬ್ಬಳ್ಳಿ: ಬುಧವಾರ ಹಳೇಹುಬ್ಬಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಏಳು ಜನರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಡಿಸಿಪಿ ಮಹನಿಂಗ ನಂದಗಾವಿ ಹೇಳಿದರು.
ಮಹನಿಂಗ ನಂದಗಾವಿ, ಡಿಸಿಪಿ
ಇಲ್ಲಿನ ಹಳೇಹುಬ್ಬಳ್ಳಿ ಠಾಣೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಯೋಧ್ಯೆ ನಗರದಲ್ಲಿ ಮಾರುತಿ ನಾರಾಯಣಪುರ ಎಂಬಾತನ ಮೇಲೆ ಯುವಕರ ಗುಂಪೊಂದು ಅಟ್ಟಾಡಿಸಿ ಚಾಕುವಿನಿಂದ ಬೆನ್ನಿಗೆ, ಪಕ್ಕಡೆ ಭಾಗಕ್ಕೆ ಇರಿಯಲಾಗಿತ್ತು.
ಪರಿಣಾಮ ಗಂಭೀರವಾಗಿ ಗಾಯಗೊಂಡ ಮಾರುತಿಯನ್ನು ಸ್ಥಳೀಯರು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಈ ಪ್ರಕರಣವನ್ನು ದಾಖಲಿಸಿಕೊಂಡ ಹಳೇಹುಬ್ಬಳ್ಳಿ ಠಾಣೆಯ ಪೊಲೀಸರು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಶಿವಶಂಕರ ಕಾಲೋನಿಯ ನಿವಾಸಿಗಳಾದ ರೋಹಿತ್ ಹಂಚಿನಮನಿ, ವಿಶಾಲ ಬಿಲಾನಾ, ಕುಶಾಲ ವಜ್ಜನ್ನವರ, ಶ್ರೀಕಾಥ್ ದುಂಡಿ, ವಿಶಾಲ ಡೋಣಿ, ಅಜಯ್ ಹಂಚಿನಮನಿ, ಪೃಥ್ವಿರಾಜ್ ಕೌದಿ ಎಂಬಾತರನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ ಎರಡು ಚಾಕು, ಒಂದು ಪಂಚ್ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.
ತನಿಖೆ ವೇಳೆ ಶಾಲೆಯ ಕಾರ್ಯಕ್ರಮವೊಂದರಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಹಳೆಯ ವೈಷಮ್ಯಕ್ಕೆ ಚಾಕು ಇರಿಯಲಾಗಿದೆ ಎಂದರು.
ಕೆಎಲ್ಇ ಮೆಡಿಕಲ್ ಕಾಲೇಜಿನಲ್ಲಿ ಕಾರ್ಮಿಕರ ತಂಟೆ:
ಕಸಬಾಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬಿಡನಾಳ-ಗಬ್ಬೂರ ರಸ್ತೆಯಲ್ಲಿರುವ ಕೆಎಲ್ಇ ಮೆಡಿಕಲ್ ಕಾಲೇಜು ಆವರಣದಲ್ಲಿ ಕಾರ್ಮಿಕರ ನಡುವೆ ನಡೆದ ಮಾರಾಮಾರಿ ವಿಷಯಕ್ಕೆ ಸಂಬಂಧಿಸಿದಂತೆ ನಾಲ್ಕು ಜನರನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಮಹನಿಂಗ ನಂದಗಾವಿ ಹೇಳಿದರು.
ಬುಧವಾರ ಮಧ್ಯಾಹ್ನ ನೀರಿನ ವಿಷಯಕ್ಕೆ ನಡೆದ ಗಲಾಟೆಯಲ್ಲಿ ಬಿಹಾರ ಮೂಲದ ಸಂತೋಷ (54), ಬಚ್ಚು 40, ಬಿಕ್ರಮ (34) ಎಂಬಾತರು ಗಾಯಗೊಂಡು ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು.
ಈ ಕುರಿತು ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಈ ಪ್ರಕರಣವನ್ನು ತನಿಖೆ ನಡೆಸಿರುವ ಪೊಲೀಸರು ಸುಗ್ರಿನ್, ನವೀನ, ಶಿವಕುಮಾರ್, ಗೋವಿಂದ ಎಂಬಾತರನ್ನು ಬಂಧಿಸಿ ಹೆಚ್ಚಿನ ತನಿಖೆ ಮಾಡಲಾಗುತ್ತಿದೆ ಎಂದು ತಿಳಿಸಿದರು.