ಹುಬ್ಬಳ್ಳಿ: ಜನರಿಲ್ಲದ ವೇಳೆ ಮನೆಗಳ ಬೀಗ ಒಡೆದು ಚಿನ್ನಾಭರಣ ಕಳವು ಮಾಡುತ್ತಿದ್ದ ಓರ್ವ ಅಂತರಾಜ್ಯ ಹಾಗೂ ಇಬ್ಬರು ಧಾರವಾಡ ಮೂಲದ ಖತರ್ನಾಕ ಮನೆಗಳ್ಳರನ್ನು ಬಂಧಿಸುವಲ್ಲಿ ಹಳೇಹುಬ್ಬಳ್ಳಿಯ ಪೋಲಿಸರು ಯಶಸ್ವಿಯಾಗಿದ್ದಾರೆ.
ಗೋವಾ ಮೂಲದ ರಾಜು ಉರ್ಫ್ ಗಂಗಾ ರಾಜು, ಧಾರವಾಡ ಮೂಲದ ತಾಹೀರ್ ಅಲಿ ಇರಾನಿ, ಜಾಫರ್ ಅಲಿ ಇರಾಲಿ ಬಂಧಿತರಾಗಿದ್ದಾರೆ.
ಆರೋಪಿಗಳು ಕಾರಿನಲ್ಲಿ ಬಂದು ಯಾರೂ ಇಲ್ಲದ ಮನೆಗಳನ್ನು ಗುರುತಿಸಿಕೊಂಡು ರಾತ್ರಿ ವೇಳೆ ಬೀಗ ಒಡೆದು ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದರು. ಕೆಲ ದಿನಗಳ ಹಿಂದೆ ಹಳೇಹುಬ್ಬಳ್ಳಿ ಠಾಣಾ ವ್ಯಾಪ್ತಿಯಲ್ಲಿ ಪ್ರಶಾಂತನಗರ, ಸಿದ್ದಲಿಂಗೇಶ್ವರ ಕಾಲನಿ, ಆನಂದನಗರ ಹಾಗೂ ಬೈಲ್ ಹೊಂಗಲ್, ಹುಕ್ಕೇರಿ ಪೋಲಿಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿದ್ದವು.
ಈ ಬಗ್ಗೆ ಹಳೇಹುಬ್ಬಳ್ಳಿ ಪೋಲಿಸರು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಎಸ್.ಹೆಚ್.ಯಳ್ಳೂರ ವಿಶೇಷ ತಂಡದೊಂದಿಗೆ ಕಾರ್ಯಾಚರಣೆಗೆ ಇಳಿದು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರಿಂದ 6.68 ಲಕ್ಷ ರೂ ಮೌಲ್ಯದ 104 ಗ್ರಾಂ ಚಿನ್ನ, ಬೆಳ್ಳಿ ಹಾಗೂ ಕೃತ್ಯಕ್ಕೆ ಬಳಸಿದ ಕಾರನ್ನು ವಶಕ್ಕೆ ಪಡೆದುಕೊಂಡು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಪಿಎಸ್ಐ ರೂಪಕ ಡಿ, ವ್ಹಿ.ಹೆಚ್.ಚರಡಿ, ಸುಮನ್ ಪವಾರ, ಎಎಸ್ಐ ಪಿ.ಬಿ.ಕಾಳೆ, ಎನ್.ಎಮ್.ಪಾಟೀಲ್, ಎಸ್.ಎಸ್.ಪಾಂಡೆ, ಎ.ಪಿ.ಕಟ್ನಳ್ಳಿ, ಐ.ಎಸ್.ಸಂಶಿ, ಎಸ್.ಎ.ವಲ್ಯಾಪೂರ, ಬಿ.ಎಮ್.ಹುದ್ದೇರಿ, ವಿ.ಹೆಚ್.ಹೊಸಳ್ಳಿ, ಜೆ.ಬಿ.ಗೌಂಡಿ, ಹೆಚ್.ಡಿ.ಬಂಡಿವಡ್ಡರ ಇದ್ದಾರೆ. ಇವರ ಕಾರ್ಯವನ್ನು ಹು-ಧಾ ಪೋಲಿಸ ಆಯುಕ್ತರಾದ ರೇಣುಕಾ ಸುಕುಮಾರ ಮೆಚ್ಚಿದ್ದು, ಪ್ರಶಂಸೆ ವ್ಯಕ್ತಪಡಿಸಿದ್ದಾರೆ.