ಧಾರವಾಡ: ರೈತರು ಸಾಲಭಾದೆಯಿಂದ ತಮ್ಮ ಆತ್ಮಸ್ಥೈರ್ಯ ಕಳೆದುಕೊಳ್ಳದೇ, ಕೃಷಿ ಇಲಾಖೆಯಿಂದ ಅಗತ್ಯ ಮಾಹಿತಿ ಪಡೆದು, ಸರ್ಕಾರದ ಸವಲತ್ತುಗಳನ್ನು ಸದುಪಯೋಗ ಪಡೆದು ಆಧುನಿಕ ಕೃಷಿ ಪದ್ದತಿ ಅಳವಡಿಸಿಕೊಂಡು ಉತ್ತಮ ಬೆಳೆಯನ್ನು ಬೆಳೆದು, ನಾಡಿಗೆ ಅನ್ನ ನೀಡಬೇಕೆಂದು ಸಹಾಯಕ ಕೃಷಿ ನಿರ್ದೇಶಕ ರಾಜಶೇಖರ ಅಣಗೌಡರ ಹೇಳಿದರು.
ರಾಜಶೇಖರ ಅಣಗೌಡರ (ಸಹಾಯಕ ಕೃಷಿ ನಿರ್ದೇಶಕರು)
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತಿಚೆಗೆ ಸರಿಯಾದ ಮಳೆಬೆಳೆಯಾಗದೇ ರೈತರು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಮೊದಲೇ ಸಾಲಸೋಲ ಮಾಡಿ ಕೃಷಿ ಮಾಡುತ್ತಿರುವ ರೈತನಿಗೆ ಮಾನ್ಸೂನ್ ರೈತನ ಬದುಕಿನಲ್ಲಿ ಚೆಲ್ಲಾಟ ಮಾಡುತ್ತಿದೆ. ಕೆಲವು ರೈತರು ಜೀವನದ ಒತ್ತಡವನ್ನು ತಾಳಲಾರದೆ ದುಡುಕಿ ಆತ್ಮಹತ್ಯೆಯಂತಹ ನಿರ್ಧಾರಕ್ಕೆ ಒಳಗಾಗುತ್ತಿದ್ದಾರೆ. ರೈತರು ದುಡುಕಿ ಕೆಟ್ಟ ನಿರ್ಧಾರವನ್ನು ತೆಗೆದುಕೊಳ್ಳಬಾರದು ಎಂದರು.
ಸರ್ಕಾರ ಈಗಾಗಲೇ ರೈತರಿಗಾಗಿ ಹಲವಾರು ಯೋಜನೆ ಮಾಡಿದ್ದು ಅದರ ಸದುಪಯೋಗ ರೈತರು ಪಡೆದುಕೊಳ್ಳಬೇಕು ಎಂದ ರಾಜಶೇಖರ ಅಣಗೌಡರ ಇತ್ತಿಚೆಗೆ ದಿನಗಳಲ್ಲಿ ಆಗುತ್ತಿರುವ ರೈತರ ಆತ್ಮಹತ್ಯೆ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಹೀಗೆ ಆತ್ಮಹತ್ಯೆ ಮಾಡಿಕೊಳ್ಳುವ ರೈತನ ಕುಟುಂಬಕ್ಕೆ ನೆರವಾಗಲು ಸರ್ಕಾರ ಪರಿಹಾರ ನೀಡುತ್ತಿದೆ. ಆದರೆ ಇದರ ಸರಿಯಾದ ಅರಿವು ಇಲ್ಲದೇ ಮೃತ ರೈತನ ಕುಟುಂಬಸ್ಥರು ಪರಿಹಾರಕ್ಕೆ ಅಲೆದಾಡುವ ಪರಿಸ್ಥಿತಿ ಗಮನಿಸಿದ್ದೇನೆ.
ಇಂತಹ ಪರಿಸ್ಥಿತಿ ಎದುರಾಗಬಾರದೆಂಬ ಕಾರಣಕ್ಕೆ ಮೃತ ರೈತನ ಕುಟುಂಬಕ್ಕೆ ನೀಡಲಾಗುವ ಪರಿಹಾರಕ್ಕೆ ಸಾಲಭಾದೆಯಿಂದ ಮನನೊಂದು ಸಾವನ್ನಪ್ಪಿದ ರೈತರ ಕುಟುಂಬಸ್ಥರು, ರೈತ ಸಾವನ್ನಪ್ಪಿದ ಮೂರು ತಿಂಗಳ ಒಳಗಾಗಿ ಅಗತ್ಯ ದಾಖಲೆಗಳೊಂದಿಗೆ ಸ್ಥಳೀಯ ಕೃಷಿ ಇಲಾಖೆಯಲ್ಲಿ ಅರ್ಜಿ ಸಲ್ಲಿಸಬೇಕು. ಆಗ ಅಧಿಕಾರಿಗಳ ಸಮಿತಿ ಅರ್ಜಿ ಪರಿಶೀಲಿಸಿ ಪರಿಹಾರ ವಿತರಣೆ ಮಾಡುತ್ತದೆ.
ಒಂದು ವೇಳೆ ಆರು ತಿಂಗಳ ಮೇಲ್ಪಟ್ಟ ಅರ್ಜಿಗಳನ್ನು ತಿರಸ್ಕಾರ ಮಾಡಲಾಗುವುದು, ಮೂರು ತಿಂಗಳ ಅವಧಿ ಮೀರಿದ ಅರ್ಜಿಯನ್ನು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಿತಿ ಅರ್ಜಿ ಪರಿಶೀಲನೆ ಮಾಡಬೇಕಾಗುತ್ತದೆ ಎಂದು ತಿಳಿಸಿದರು.