ಹುಬ್ಬಳ್ಳಿ: ಈಗಾಗಲೇ ಜನರಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡುವ ಮೂಲಕ ಹೆಸರುವಾಸಿಯಾಗಿರುವ ಹು-ಧಾ ಮಹಾನಗರ ಪಾಲಿಕೆಯ ಚಿಟಗುಪ್ಪಿ ಆಸ್ಪತ್ರೆ ಇದೀಗ ಬಡವರ ಪಾಲಿನ ಸಂಜೀವಿನಿ ಎಂದು ಕರೆಸಿಕೊಳ್ಳುವ ಕಿಮ್ಸ್ ಆಸ್ಪತ್ರೆಯಂತೆಯೇ, ಚಿಟಗುಪ್ಪಿ ಆಸ್ಪತ್ರೆಯ ವೈದ್ಯರು ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ನಡೆಸಿ ಮೂವರು ಮಹಿಳೆಯರಿಗೆ ಮರುಜೀವ ನೀಡಿದ್ದಾರೆ.
ಹುಬ್ಬಳ್ಳಿ ಜನತೆಗೆ ಹಾಗೂ ಅಕ್ಕಪಕ್ಕದ ಊರಿನ ಜನರಿಗೆ ಜಿಲ್ಲೆಯ ಚಿಟಗುಪ್ಪಿ ಆಸ್ಪತ್ರೆಯು ಉತ್ತಮ ಸೇವೆಯನ್ನು ನೀಡುತ್ತಾ ಬಂದಿದೆ. ಇಲ್ಲಿ ಮಹಿಳೆಯರಿಗೆ ಸುರಕ್ಷಿತ ಹೆರಿಗೆ ಹಾಗೂ ಸಂತಾನಹರಣ ಶಸ್ತ್ರ ಚಿಕಿತ್ಸೆ ಸೇರಿ ವಿವಿಧ ರೀತಿಯ ಚಿಕಿತ್ಸೆ ನೀಡಲಾಗುತ್ತಿದೆ. ಇದೀಗ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಶ್ರೀಧರ ದಂಡೆಪ್ಪನವರ ನೇತೃತ್ವದಲ್ಲಿ ಮೂವರು ಮಹಿಳೆಯರಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ.
ಹುಬ್ಬಳ್ಳಿಯ 46 ವರ್ಷದ ಫಕ್ಕಿರವ್ವ ನಾಗಸಮುದ್ರ ಎಂಬ ಕಾರ್ಮಿಕ ಮಹಿಳೆಯೊಬ್ಬಳು ರಕ್ತದ ಹೀನತೆಯಿಂದ ಬಳಲುತ್ತಿದ್ದಳು, ಇದರಿಂದ ಮಹಿಳೆಗೆ ಅತಿಯಾದ ಸುಸ್ತು, ನಡೆದಾಡಲು ಆಗದೇ ಇರುವಂತಹ ಪರಿಸ್ಥಿತಿಯಲ್ಲಿದ್ದರು. ಈ ಮಹಿಳೆ ಚಿಟಗುಪ್ಪಿ ಆಸ್ಪತ್ರೆಗೆ ದಾಖಲಾಗಿದ್ದರು. ಇವರನ್ನು ಪರೀಕ್ಷೆ ನಡೆಸಿದ ಸಂದರ್ಭದಲ್ಲಿ ಮಹಿಳೆಯ ಹೊಟ್ಟೆಯಲ್ಲಿ ಸರಿಸುಮಾರು 2.4 ಕೆಜಿ ಯಷ್ಟು ಫ್ರೈಬ್ರಾಯ್ಡ್ ಗಡ್ಡೆ ಇರುವುದು ಪತ್ತೆಯಾಗಿದೆ. ಬಳಿಕ ಡಾ. ಶ್ರೀಧರ ದಂಡೆಪ್ಪನವರ ಮಹಿಳೆಗೆ ಶಸ್ತ್ರ ಚಿಕಿತ್ಸೆ ಮಾಡಿದ್ದು, ಈಗ ಮಹಿಳೆ ಸುರಕ್ಷಿತವಾಗಿದ್ದಾರೆ.
ಅದೇ ರೀತಿ ಕೊನ್ನೂರು ಗ್ರಾಮದ 70 ವರ್ಷದ ವೃದ್ದೆಯೊಬ್ಬರು ಲಾರ್ಜ್ ಓರಿಯನ್ ಟ್ಯೂಮರ್ ಅಂದ್ರೆ ಅಂಡಾಶಯದ ಕ್ಯಾನ್ಸರ್ ಗಡ್ಡೆಯಿಂದ ಬಳಲುತ್ತಿದ್ದರು. ಆಸ್ಪತ್ರೆಗೆ ದಾಖಲಾದ ವೃದ್ದೆಯನ್ನು ಪರೀಕ್ಷಿಸಿದಾಗ ಅಂಡಾಶಯದಲ್ಲಿ ಗಡ್ಡೆ ಇರುವುದು ಪತ್ತೆಯಾಗಿತ್ತು. ಬಳಿಕ ಮಹಿಳೆಗೆ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಮಹಿಳೆಗೆ ಮರು ಜೀವ ನಡೆಸಿದ್ದಾರೆ.
ಇನ್ನೊಂದು ಕ್ಲಿಷ್ಟಕರ ಚಿಕಿತ್ಸೆಯಲ್ಲಿ ಹಾರೋಬೆಳವಡಿಯ 43 ವರ್ಷದ ಮಹಿಳೆಯು ಫ್ರೈಬ್ರಾಯ್ಡ್ ಗಡ್ಡೆಯಿಂದ ಬಳಲುತ್ತಿದ್ದರು. ಇವರಿಗೂ ಡಾ. ಶ್ರೀಧರ ದಂಡೆಪ್ಪನವರ ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ. ಈ ಮೂಲಕ ಮೂವರು ಮಹಿಳೆಯರಿಗೆ ಮರುಜೀವ ನೀಡಿದ್ದಾರೆ. ಈ ಎಲ್ಲ ಚಿಕಿತ್ಸೆಯನ್ನು ಲ್ಯಾಪರೋಸ್ಕೋಪಿಕ್ ಅಂದ್ರೆ ಉದರ ದರ್ಶಕದಿಂದ ಯಶಸ್ವಿಯಾಗಿ ಚಿಕಿತ್ಸೆ ನಡೆಸಿದ್ದಾರೆ. ಇವರಿಗೆ ಓಟಿ ಟೆಕ್ನಿಶಿಯನ್ ರಾಮ, ಸಿಬ್ಬಂದಿಗಳಾದ ರಾಮ, ಬಸಮ್ಮ ಸಾಥ್ ಕೊಟ್ಟಿದ್ದಾರೆ.
ನಮ್ಮ ಆಸ್ಪತ್ರೆಯಲ್ಲಿ ವಿಭಿನ್ನ ಪ್ರಕರಣಗಳಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದೆ. ಪ್ರಮುಖವಾಗಿ ನಮ್ಮ ಆಸ್ಪತ್ರೆಯಲ್ಲಿ ಲ್ಯಾಪರೋಸ್ಕೋಪಿ ತಂತ್ರಜ್ಞಾನ ಬಳಸಿ ಸರ್ಜರಿ ಮಾಡಲಾಗುತ್ತಿದ್ದು, ಈಗಾಗಲೇ ಸಾಕಷ್ಟು ಮಹಿಳೆಯರಿಗೆ ವಿವಿಧ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಈ ತಂತ್ರಜ್ಞಾನ ಮೂಲಕ ಜನರಿಗೆ ಶಸ್ತ್ರಚಿಕಿತ್ಸೆ ಹಾಗೂ ಕ್ಯಾನ್ಸರ್ಗೆ ಚಿಕಿತ್ಸೆ ನೀಡಲಾಗುತ್ತಿದೆ. ನಮ್ಮಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿ ಚಿಕಿತ್ಸೆ ನೀಡಲಾಗುತ್ತಿದ್ದು, ರೋಗಿಗಳು ಇದರ ಲಾಭ ಪಡೆಯಬೇಕು.
– ಡಾ.ಶ್ರೀಧರ ದಂಡಪ್ಪನವರ, ಮುಖ್ಯ ವೈದ್ಯಾಧಿಕಾರಿ, ಚಿಟಗುಪ್ಪಿ ಆಸ್ಪತ್ರೆ
ನನಗೆ ಹೊಟ್ಟೆಯಲ್ಲಿ ಗಡ್ಡೆ ಇದೆ ಎಂಬುದೆ ಗೊತ್ತು ಇರಲಿಲ್ಲ, ಅತಿಯಾದ ಆಯಾಸದ ಕಾರಣ ಚಿಟಗುಪ್ಪಿ ಆಸ್ಪತ್ರೆಗೆ ಬಂದು ತೋರಿಸಿದೆ. ಇಲ್ಲಿ ವೈದ್ಯರ ತಪಾಸಣೆ ಬಳಿಕ ಹೊಟ್ಟೆಯಲ್ಲಿ ಗಡ್ಡೆ ಇರುವುದು ಗೊತ್ತಾಯಿತು. ಡಾಕ್ಟರ್ ಶ್ರೀಧರ ದಂಡೆಪ್ಪನವರ ಅವರು ನನಗೆ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಇದೀಗ ನಾನು ಹುಷಾರಾಗಿದ್ದೇನೆ. ಇಲ್ಲಿನ ವೈದ್ಯರು ನನಗೆ ಮರುಜೀವ ನೀಡಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ.
– ಫಕ್ಕಿರಪ್ಪ ನಾಗಸಮುದ್ರ, ಫೈಬ್ರಾಯ್ಡ್ ಚಿಕಿತ್ಸೆ ಪಡೆದ ರೋಗಿ