ಹುಬ್ಬಳ್ಳಿ: ಬೈಕ್ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯೊರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹುಬ್ಬಳ್ಳಿಯ ಆನಂದನಗರದಲ್ಲಿ ನಡೆದಿದೆ.
ಮಹಾಂತೇಶ ಕಲಾಲ್ ಸಾವನ್ನಪ್ಪಿದ ವ್ಯಕ್ತಿಯಾಗಿದ್ದು, ಈತ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಮಾಡಿ, ಉಪನಗರ ಠಾಣೆ ಪೊಲೀಸರ ತನಿಖೆಯ ವೇಳೆ ಬಂಧನ ಮಾಡಲಾಗಿತ್ತು. ಈ ವೇಳೆ ಸುಮಾರು 12 ಬೈಕ್ ಗಳನ್ನು ವಶಕ್ಕೆ ಪಡೆಯಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮೀನು ಪಡೆದಿದ್ದ ಮಹಾಂತೇಶ ಕಲಾಲ್ ನವೆಂಬರ್ 19 ರಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.
ಈ ವೇಳೆ ಸ್ಥಳೀಯರು ಮಹಾಂತೇಶ ಕಲಾಲ್’ನನ್ನು ರಕ್ಷಿಸಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ನವೆಂಬರ್ 22 ರಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.
ಇನ್ನು ಈ ಕುರಿತು ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸದ್ಯ ಮಹಾಂತೇಶ ಕಲಾಲ್ ಸಾವಿಗೆ ನಿಖರವಾದ ಮಾಹಿತಿ ತಿಳಿದುಬಂದಿಲ್ಲ. ಈ ಬಗ್ಗೆ ಪೊಲೀಸರು ಸರಿಯಾದ ತನಿಖೆ ನಡೆಸಿ ಯಾವ ಕಾರಣಕ್ಕೆ ಆತ್ಮಹತ್ಯೆಗೆ ಮುಂದಾಗಿದ್ದ ಎಂಬ ಸತ್ಯಾಂಶವನ್ನು ಹೊರಹಾಕಬೇಕಿದೆ.