ಧಾರವಾಡ: ಅರವಿಂದ ಕ್ರೇಜಿವಾಲ್ ಅವರ ಮುಂದಾಳತ್ವದಲ್ಲಿ ಸತತವಾಗಿ ದೆಹಲಿಯಲ್ಲಿ ಆಡಳಿತ ನಡೆಸುತ್ತಿರುವ ಆಮ್ ಆದ್ಮಿ ಪಕ್ಷವು ಇದೀಗ ಇಂಡಿಯಾ ಒಕ್ಕೂಟದಲ್ಲಿ ಗುರುತಿಸಿಕೊಂಡಿದೆ. ಹೀಗಾಗಿ ಧಾರವಾಡ ಜಿಲ್ಲೆಯಲ್ಲಿ ಆಮ್ ಆದ್ಮ ಪಕ್ಷವೂ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಬೆಂಬಲ ಸೂಚಿಸಿದೆ.
ಹೌದು, ಈಗಾಗಲೇ ಕಾಂಗ್ರೆಸ್ ಹಾಗೂ ಆಪ್ ಪಕ್ಷಗಳೆರಡು ಸೇರಿಕೊಂಡು ಲೋಕಸಭಾ ಕ್ಷೇತ್ರದಾದ್ಯಂತ ಪ್ರಚಾರ ಕಾರ್ಯದಲ್ಲಿ ತೊಡಗಿವೆ. ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕಾಂಗ್ರೆಸ್‌ನ ಧಾರವಾಡ ಲೋಕಸಭಾ ಕ್ಷೇತ್ರ ಉಸ್ತುವಾರಿಯಾಗಿರುವ ಸಂತೋಷ ಲಾಡ್ ಅವರು ಈಗಾಗಲೇ ಆಮ್ ಆದ್ಮ ಪಕ್ಷದ ಜಿಲ್ಲಾಧ್ಯಕ್ಷರು ಸೇರಿದಂತೆ ಮುಖಂಡರೊಂದಿಗೆ ನಿರಂತರವಾಗಿ ಸಭೆಗಳನ್ನು ನಡೆಸಿದ್ದಾರೆ.
ಈ ವೇಳೆ ಕೈ ಅಭ್ಯರ್ಥಿ ಗೆಲುವಿನಲ್ಲಿ ಪಾತ್ರ ವಹಿಸಲು ಮನವಿ ಮಾಡಿವೆ. ಹೀಗಾಗಿ ಆಪ್ ಪಕ್ಷವು ಎಲ್ಲಿ ಸದೃಢವಾಗಿದೆಯೋ ಅಲ್ಲಿ ಕಾಂಗ್ರೆಸ್ ಪರ ಮತಯಾಚನೆ ಮಾಡುವಂತೆ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.
ಆಪ್ ಆದ್ಮಿ ಪಕ್ಷ 2018, 2023ರ ವಿಧಾನಸಭೆ ಹಾಗೂ 2021ರ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಪ್ ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗೆ ಇಳಿಸಿತ್ತು. ಆದರೆ ಮತದಾರ ಕೈ ಹಿಡಿಯಲಿಲ್ಲ. ಆದರೆ ಕೆಲವರು ಸಾವಿರಗಟ್ಟಲೇ ಮತ ಪಡೆಯುವಲ್ಲಿ ಯಶಸ್ವಿಯಾಗಿ ಜಿಲ್ಲೆಯಲ್ಲಿ ತನ್ನ ಅಸ್ತಿತ್ವವನ್ನು ಸಾಬೀತು ಮಾಡಿತು.
ಇನ್ನು 2014ರಲ್ಲಿ ನಡೆದಿದ್ದ ಲೋಕಸಭೆ ಚುನಾವಣೆಯಲ್ಲಿ ತನ್ನ ಹುರಿಯಾಳನ್ನು ಕಣಕ್ಕಿಳಿಸಿವೆ. ಆಗ ಸರಿಸುಮಾರು 5 ಸಾವಿರಕ್ಕೂ ಅಧಿಕ ಮತ ಪಡೆದಿದ್ದರು. ಆದರೆ 2019ರ ಲೋಕ ಸಭಾ ಚುನಾವಣೆಯಲ್ಲಿ ಮಾತ್ರ ಸ್ಪರ್ಧಿಸಿರಲಿಲ್ಲ. ಇದೀಗ ಮೈತ್ರಿಯಿಂದಾಗಿ ಕಾಂಗ್ರೆಸ್‌ಗೆ ಬೆಂಬಲ ಸೂಚಿಸುತ್ತಿದೆ. ಕಾಂಗ್ರೆಸ್‌ಗೆ ಜತೆಯಾಗಿ ಚುನಾವಣಾ ಕಾರ್ಯದಲ್ಲಿ ತೊಡಗಿದೆ. ಈ ಮೂಲಕ ಬಿಜೆಪಿಗೆ ಜೆಡಿಎಸ್, ಕಾಂಗ್ರೆಸ್ ಗೆ ಆಪ್ ಜತೆಯಾದಂತಾಗಿದೆ.
ಈಗಾಗಲೇ ಕಾಂಗ್ರೆಸ್ ಮುಖಂಡರು ಕಾಂಗ್ರೆಸ್ ಕಾರ್ಯಕ್ರಮಗಳಲ್ಲೂ ಭಾಗವಹಿ ಸುವಂತೆ ಆಪ್ ಕಾರ್ಯಕರ್ತರಿಗೆ ಕೋರಿದ್ದಾರೆ. ಹೀಗಾಗಿ ಬೂತ್ ಮಟ್ಟದಲ್ಲಿ ಆಪ್ ಕಾರ್ಯಕರ್ತರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಕೆಲಸದಲ್ಲಿ ತೊಡಗಿದ್ದು, ಕಾಂಗ್ರೆಸ್ ಪರಪ್ರಚಾರಕ್ಕೆ ಇಳಿದಿದ್ದಾರೆ.
ಇನ್ನು ಹದಿನೈದು ದಿನಗಳ ಕಾಲ ಬೂತ್ ಮಟ್ಟದಲ್ಲೇ ಕೆಲಸ ಮಾಡಿ ಆಮೇಲೆ ಬಹಿರಂಗ ಸಭೆಗಳಲ್ಲಿ ಭಾಗವಹಿಸಲು ಆಪ್ ಕಾರ್ಯಕರ್ತರು ನಿರ್ಧರಿಸಲಾಗಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಕಾರ್ಯದರ್ಶಿ ಅನಂತಕುಮಾರ ಬುಗಡಿ ತಿಳಿಸಿದ್ದಾರೆ.