ಅಸಂಘಟಿತ ಕಾರ್ಮಿಕರಲ್ಲಿ ಸಾರಿಗೆ ಸಿಬ್ಬಂದಿ ಸೇರ್ಪಡೆ ಸ್ವಾಗತ: ಗಿರೀಶ್ ಮಲ್ನಾಡ್

ಹುಬ್ಬಳ್ಳಿ: ರಾಜ್ಯ ಸರ್ಕಾರ ಅಸಂಘಟಿತ ಕಾರ್ಮಿಕರ ಕ್ಷೇಮಾಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಇದೀಗ ಅಸಂಘಟಿಕ ಕಾರ್ಮಿಕರಲ್ಲಿ ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರನ್ನು ಸಹ ಸೇರ್ಪಡೆ ಮಾಡಿರುವುದನ್ನು ದಿ.ಧಾರವಾಡ ಜಿಲ್ಲಾ ಲಾರಿ ಮಾಲೀಕರ ಸಂಘ ಸ್ವಾಗತಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಜಿಲ್ಲಾಧ್ಯಕ್ಷ ಗಿರೀಶ್ ಮಲ್ನಾಡ್, ಅಸಂಘಟಿತ ವರ್ಗದ ಕಾರ್ಮಿಕರಲ್ಲಿ ಸಾರಿಗೆಯಲ್ಲಿ ಕೆಲಸ ಮಾಡುವವರ ಸಂಖ್ಯೆ ಹೆಚ್ಚಿದೆ. ಈ ದಿಸೆಯಲ್ಲಿ ಸರ್ಕಾರ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಹಾಗೂ ಕಲ್ಯಾಣ ಸೌಲಭ್ಯಗಳನ್ನು ಒದಗಿಸಲು ಕರ್ನಾಟಕ ರಾಜ್ಯ ಮೋಟಾರು ಸಾರಿಗೆ ಹಾಗೂ ಇತರೆ ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ಮಂಡಳಿಯ ಮೂಲಕ ಕರ್ನಾಟಕ ಮೋಟಾರು ಸಾರಿಗೆ ಮತ್ತು ಇತರೆ ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮತ್ತು ಕಲ್ಯಾಣ ಯೋಜನೆಯನ್ನು ಜಾರಿಗೊಳಿಸಿದೆ.
ಈ ಯೋಜನೆ ಅಡಿಯಲ್ಲಿ ಚಾಲಕ, ನಿರ್ವಾಹಕ, ಕ್ಲಿನರ್, ನಿಲ್ದಾಣ ಸಿಬ್ಬಂದಿ, ಮಾರ್ಗ ಪರಿಶೀಲನಾ ಸಿಬ್ಬಂದಿ, ಬುಕಿಂಗ್ ಗುಮಾಸ್ತ, ನಗದು ಗುಮಾಸ್ತ, ಡಿಪೋ ಗುಮಾಸ್ತ, ಸಮಯ ಪಾಲಕ, ಕಾವಲುಗಾರ, ಮೋಟಾರು ಗ್ಯಾರೇಜುಗಳಲ್ಲಿ ಟೈರ್ ಜೋಡಿಸುವವ, ಪಂಚರ್ ದುರಸ್ತಿ ಮಳಿಗೆಗಳಲ್ಲಿ, ವೀಲ್ ಬ್ಯಾಲೆನ್ಸೆಂಗ್ ಮತ್ತು ಅಲೈನ್ಮೆಂಟ್ ಘಟಕಗಳಲ್ಲಿ, ನೀರಿನಿಂದ ಸ್ವಚ್ಛಗೊಳಿಸುವ ಘಟಕಗಳಲ್ಲಿ, ಟಿಂಕರಿಂಗ್, ಎಲೆಕ್ಟಿಕಲ್ ಹಾಗೂ ಎಸಿ ಘಟಕ ಮುಂತಾದ ವಿಭಾಗದಲ್ಲಿ ಕೆಲಸ ಮಾಡುವ ಸರಿಸುಮಾರು 40 ಲಕ್ಷಕ್ಕೂ ಅಧಿಕ ಕಾರ್ಮಿಕರನ್ನು ಈ ಯೋಜನೆ ಒಳಗೊಂಡಿದೆ.
ಈ ಯೋಜನೆಯಿಂದ ಅಪಘಾತ ಪರಿಹಾರವಾಗಿ ಫಲಾನುಭವಿ ಮೃತರ ಕುಟುಂಬಕ್ಕೆ ಐದು ಲಕ್ಷ ಪರಿಹಾರ, ಗಾಯಗೊಂಡಲ್ಲಿ 2 ಲಕ್ಷದ ವರೆಗೆ ಪರಿಹಾರ, ಚಿಕಿತ್ಸಾ ವೆಚ್ಚ, ಒಂದು ವೇಳೆ ನೈಸರ್ಗಿಕವಾಗಿ ಮರಣ ಹೊಂದಿದ್ದಲ್ಲಿ ಅಂತ್ಯಸಂಸ್ಕಾರಕ್ಕೆ 25 ಸಾವಿರ ಪರಿಹಾರ, ಇದಲ್ಲದೇ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಶೈಕ್ಷಣಿಕ ಧನಸಹಾಯವನ್ನು ನೀಡುತ್ತಿದೆ. ಇದು ಸಾರಿಗೆ ಕ್ಷೇತ್ರದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಬಹಳಷ್ಟು ಅನುಕೂಲವಾಗಲಿದೆ. ಇಂತಹ ಯೋಜನೆಯನ್ನು ಜಾರಿಗೆ ತಂದ ರಾಜ್ಯ ಸರ್ಕಾರ ಹಾಗೂ ಕಾರ್ಮಿಕ ಸಚಿವ ಸಂತೋಷ ಲಾಡ್ ಅವರಿಗೆ ಧಾರವಾಡ ಜಿಲ್ಲಾ ಲಾರಿ ಮಾಲೀಕರ ಸಂಘದಿಂದ ಅಭಿನಂದನೆಗಳನ್ನು ತಿಳಿಸಿದ್ದಾರೆ.
ಸಚಿವ ಸಂತೋಷ ಲಾಡ್’ಗೆ ಸನ್ಮಾನ

ಕಾರ್ಮಿಕ ಇಲಾಖೆ ಮಂಗಳವಾರ ಹುಬ್ಬಳ್ಳಿಯ ಬೆಂಗೇರಿಯ ಸಂತೆ ಮೈದಾನದಲ್ಲಿ ಏರ್ಪಡಿಸಿದ್ದ, ಧಾರವಾಡ ಜಿಲ್ಲೆಯ ವಿವಿಧ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಿಸುವ ಕಾರ್ಯಕ್ರಮದಲ್ಲಿ ಧಾರವಾಡ ಜಿಲ್ಲಾ ಲಾರಿ ಮಾಲೀಕರ ಸಂಘದಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಮುಖಂಡರಾದ ನರೇಶ ಮಲ್ನಾಡು, ಅಶ್ವಿನ್ ಮಾಗಡಿ, ಮುಕ್ತುಂ ಮದ್ರಾಸ್, ಮಹಮ್ಮದ್ ಅಲಿ ನವಲೂರ, ಅರ್ಜುನ ಧಾರವಾಡ, ಜಾಫರ್, ಶಾನು, ಸಾಧಿಕ್ ಮೀಯಾನವರ ಸೇರಿದಂತೆ ಮುಂತಾದವರು ಇದ್ದರು.




