
ಹುಬ್ಬಳ್ಳಿ: ಬಡ ಯುವತಿಯರನ್ನೇ ಟಾರ್ಗೆಟ್ ಮಾಡಿ ಪ್ರೀತಿಸುವ ನೆಪದಲ್ಲಿ ಹಣದ ಆಮಿಷವನ್ನು ತೋರಿಸಿ ಲೈಂಗಿಕ ದೌರ್ಜನ್ಯ ಎಸಗಿ, ವಿಡಿಯೋವನ್ನು ಸೆರೆ ಹಿಡಿದು ಬೆದರಿಕೆ ಹಾಕುತ್ತಿದ್ದ ವಿಕೃತ ಕಾಮಿಯನ್ನು ಬಂಧಿಸಲಾಗಿದ್ದು, ಹೆಚ್ಚಿನ ವಿಚಾರಣೆ ಮಾಡಲಾಗಿದೆ ಎಂದು ಹು-ಧಾ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಹೇಳಿದರು.
ಹುಬ್ಬಳ್ಳಿಯ ಕಸಬಾಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾದ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಕಸಬಾಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎಲೆಕ್ಟ್ರಾನಿಕ್ಸ್ ಅಂಗಡಿಯಿಟ್ಟುಕೊಂಡು ವ್ಯಾಪಾರ ನಡೆಸುತ್ತಿದ್ದ ಶರಾವತಿ ನಗರದ ಅಶ್ಪಾಕ್ ಎಂಬಾತನು ತನ್ನ ಅಂಗಡಿಗೆ ಬರುತ್ತಿದ್ದ 13 ವರ್ಷದ ಅಪ್ರಾಪ್ತೆಯ ಪರಿಚಯ ಬೆಳೆಸಿಕೊಂಡು, ಬಳಿಕ ಚಾಕಲೇಟ್ ನೀಡುತ್ತ ಸಲುಗೆ ಬೆಳೆಸಿಕೊಂಡಿದ್ದಾನೆ. ನಂತರ ಹಣದ ಆಮಿಷವನ್ನು ತೋರಿಸಿ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದರು.
ಇನ್ನೂ ದೌರ್ಜನ್ಯಕ್ಕೆ ಒಳಗಾದ ಯುವತಿಗೆ ತಂದೆ-ತಾಯಿಗಳಿಲ್ಲ, ಅಜ್ಜಿಯ ಆಶ್ರಯದಲ್ಲಿದ್ದಾಳೆ. ಇದನ್ನೆ ಬಂಡವಾಳ ಮಾಡಿಕೊಂಡ ಆರೋಪಿ ಯುವತಿಗೆ ಹಲವು ಬಾರಿ ದೌರ್ಜನ್ಯ ಎಸಗಿದ್ದಾನೆ. ಸದ್ಯ ಅನ್ಯಾಯಕ್ಕೆ ಒಳಗಾದ ಬಾಲಕಿಯ ಅಜ್ಜಿ ನೀಡಿದ ದೂರಿನ ಅನ್ವಯ ಆರೋಪಿಯನ್ನು ಬಂಧಿಸಲಾಗಿದೆ.
ಆರೋಪಿಯು ತನ್ನ ಅಂಗಡಿಗೆ ಬರುತ್ತಿದ್ದ ಮಹಿಳೆಯರ ಮೇಲೂ ಇದೇ ತರಹ ಲೈಂಗಿಕ ದೌರ್ಜನ್ಯ ಎಸಗಿರುವ ಬಗ್ಗೆ ಶಂಕೆ ಇದ್ದು, ಅವುಗಳ ಬಗ್ಗೆ ತನಿಖೆ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ಕುರಿತು ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.