ಹುಬ್ಬಳ್ಳಿ/ಶಿಗ್ಗಾಂವಿ: ರಾಜ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಲೇ ಇದ್ದು, ಇದೀಗ ವಿವಾಹಿತ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಪ್ರಯತ್ನಿಸಿರುವ ಆಘಾತಕಾರಿ ಪ್ರಕರಣವೊಂದು ತಡಸ ಪೋಲಿಸ್ ಠಾಣೆಯಲ್ಲಿ ದಾಖಲಾಗಿದೆ.
ಲಕ್ಷ್ಮೇಶ್ವರ ಪಟ್ಟಣದ ಇರ್ಫಾನ್ ತಹಶಿಲ್ದಾರ ಎಂಬಾತ ಶಿಗ್ಗಾಂವಿ ತಾಲೂಕಿನ ತಡಸ ಮೂಲದ ವಿವಾಹಿತ ಮಹಿಳೆಯ ಮನೆಗೆ ನುಗ್ಗಿ, ಅವಾಚ್ಯವಾಗಿ ನಿಂದಿಸಿ, ಮಾನಭಂಗಕ್ಕೆ ಪ್ರಯತ್ನಿಸಿದ್ದಾನಂತೆ. ಅಷ್ಟೇ ಅಲ್ಲದೇ ಮಹಿಳೆಯ ಮಗನಿಗೆ ಹೊಡೆದು, ನೇಣು ಬಿಗಿದು ಸಾಯಿಸಲು ಮುಂದಾಗಿದ್ದಾನಂತೆ.
ನೊಂದ ಮಹಿಳೆ ನೀಡಿರುವ ದೂರಿನ ಪ್ರತಿ
ಈ ವೇಳೆ ಮನೆಯಲ್ಲಿನ ಕೂಗಾಟದ ಸದ್ದು ಕೇಳಿ ಹೊರಗಡೆ ಇದ್ದ ಮಹಿಳೆಯ ಪತಿ ಬಂದು ಬಿಡಿಸಲು ಬಂದಾಗ, ಆತನಿಗೂ ಅವಾಚ್ಯವಾಗಿ ನಿಂದಿಸಿ, ನಿನ್ನ ಹೆಂಡತಿಯ ಫೋಟೋ, ವಿಡಿಯೋ ನನ್ನ ಹತ್ತಿರ ಇದ್ದು, ಅವುಗಳನ್ನು ಎಲ್ಲೆಡೆ ಹರಿಬಿಟ್ಟು ಮಾನ ಹರಾಜು ಮಾಡುತ್ತೇನೆ ಎಂದು ಹೆದರಿಸಿ ಜೀವ ಬೆದರಿಕೆ ಹಾಕಿದ್ದಾನಂತೆ.
ಬಳಿಕ ಮಹಿಳೆಯ ಕೊರಳಿನಲ್ಲಿದ್ದ ಬಂಗಾರದ ಚೈನು ಹರಿದು, ಮಹಿಳೆಯ ಪತಿಗೆ ಕಾಲಿನಿಂದ ಒದ್ದು, ಚಾಕುವಿನಿಂದ ಇರಿಯಲು ಮುಂದಾಗಿದ್ದಾನಂತೆ. ಆಗ ಸ್ಥಳೀಯ ನಿವಾಸಿಗಳು ಬಿಡಿಸಿ ಬುದ್ದಿ ಹೇಳಿದ್ದಾರಂತೆ.
ಇದಾದನಂತರ ಆರೋಪಿ ಇರ್ಫಾನ್ ತಹಶಿಲ್ದಾರ ತಾಯಿ ಹಾಗೂ ಮತ್ತೊರ್ವ ಆರೋಪಿ ಮನೆಗೆ ಬಂದು ನನ್ನ ಮಗ ಡಾನ್ ಇದ್ದ ಹಾಗೇ, ನಿನ್ನ ಅತ್ಯಾಚಾರ ಮಾಡಿಸುತ್ತೇವೆ. ಕೊಲ್ಲುತ್ತೇವೆ ಎಂದು ಜೀವ ಬೆದರಿಕೆ ಹಾಕಿದ್ದಾರೆಂದು ದೂರು ದಾಖಲಾಗಿದೆ.
ಇನ್ನು ತಡಸ ಪೋಲಿಸರು ಐಪಿಸಿ 1860 (u/s-448, 354c, 354(d), 307, 504, 506, 34) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸದ್ಯ ಆರೋಪಿಯನ್ನು ಬಂಧಿಸಿರುವ ಪೋಲಿಸರು ನಿಷ್ಪಕ್ಷಪಾತ ತನಿಖೆ ನಡೆಸಿ, ನೊಂದ ಮಹಿಳೆಗೆ & ಮತ್ತವರ ಕುಟುಂಬಕ್ಕೆ ನ್ಯಾಯ ಒದಗಿಸತ್ತಾರಾ? ಎಂಬುದನ್ನು ಕಾದು ನೋಡಬೇಕಿದೆ.