ಹುಬ್ಬಳ್ಳಿ: ರಾಷ್ಟ್ರದಾದ್ಯಂತ ಸುದ್ದಿಯಾಗಿದ್ದ ನೇಹಾ ಹಿರೇಮಠ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು, ಎರಡು ದಿನಗಳ ಹಿಂದೆ ಹೋಟೆಲೊಂದರ ಮಾಲೀಕರು ಸೇರಿ ಇಬ್ಬರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ನೇಹಾ ಕೊಲೆ ಸಂಚಿನಲ್ಲಿ ನಾಲ್ವರ ಕೈವಾಡವಿದೆ. ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿಲ್ಲ ಎಂದು ನೇಹಾ ತಂದೆ ನಿರಂಜನಯ್ಯ ಹಿರೇಮಠ ಸಾಕಷ್ಟು ಬಾರಿ ಆರೋಪಿಸಿದ್ದರು. ಈ ನಡುವೆ ಸಿಐಡಿ ಅಧಿಕಾರಿಗಳು ಇಬ್ಬರನ್ನು ವಿಚಾರಣೆಗೆ ಒಳಪಡಿಸಿ ಹೆಚ್ಚಿನ ಮಾಹಿತಿ ಸಂಗ್ರಹಿಸಿದ್ದಾರೆ ಎನ್ನಲಾಗಿದೆ.
ಇನ್ನು ವಿದ್ಯಾನಗರ ಠಾಣೆ ಪೊಲೀಸರು ಶೇ.60 ರಷ್ಟು ತನಿಖೆ ಪೂರ್ಣಗೊಳಿಸಿದ್ದರು. ರಾಜ್ಯದಾದ್ಯಂತ ಒತ್ತಡಗಳು ಬಂದಾಗ, ಸರ್ಕಾರ ಅದನ್ನು ಸಿಐಡಿಗೆ ಹಸ್ತಾಂತರಿಸಿತ್ತು. ಸಿಐಡಿ ಪೊಲೀಸರು ಆರೋಪಿ ಫಯಾಜ್, ಅವನ ತಂದೆ-ತಾಯಿ, ಸ್ನೇಹಿತರು, ಪರಿಚಯಸ್ಥರು, ನೇಹಾ ತಂದೆ-ತಾಯಿ ಹಾಗೂ ಅನುಮಾನ ಬಂದ ಕೆಲವು ವ್ಯಕ್ತಿಗಳನ್ನು ಸಹ ವಿಚಾರಣೆಗೆ ಒಳಪಡಿಸಿ ಮಾಹಿತಿ ಸಂಗ್ರಹಿಸಿದ್ದಾರೆ.
ಕೆಲವು ಸಾಕ್ಷಿಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಿದ್ದು, ವರದಿಗಾಗಿ ಕಾಯುತ್ತಿದ್ದಾರೆ. 90 ದಿನಗಳಲ್ಲಿ ತನಿಖೆಯ ದೋಷಾರೋಪ ಪಟ್ಟಿಯನ್ನು, ಸಾಕ್ಷಾಧಾರಗಳೊಂದಿಗೆ ನ್ಯಾಯಾಲಯಕ್ಕೆ ಸಲ್ಲಿಸಬೇಕೆಂಬ ನಿಯಮವಿದೆ. ಆದ್ಯತೆ ಮೇರೆಗೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸಿಐಡಿ, ಶೀಘ್ರವೇ ನ್ಯಾಯಾಲಯಕ್ಕೆ ವರದಿ ಸಲ್ಲಿಸಲು ಮುಂದಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.