ಹುಬ್ಬಳ್ಳಿ: ಇಲ್ಲಿನ ಸಂತೋಷನಗರದ ಜೆ.ಕೆ.ಸ್ಕೂಲ್ ಬಳಿಯಲ್ಲಿ ಸೋಮವಾರ ನಡೆದ ಚಾಕು ಇರಿತಕ್ಕೆ ಸಂಬಂಧಿಸಿದಂತೆ ಅಶೋಕ ನಗರದ ಪೋಲಿಸರು ಪ್ರಕರಣವನ್ನು ದಾಖಲಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಗೊಪ್ಪನಕೊಪ್ಪದ ಡಂಬರ ಓಣಿಯ ನಿವಾಸಿಗಳಾದ ಭೀಮಪ್ಪ ಗೊಲ್ಲರ, ಕಿರಣ ಕಬ್ಬೇರ ಬಂಧಿತ ಆರೋಪಿಗಳಾಗಿದ್ದು, ಇವರು ಸೋಮವಾರ ಸಂಜೆ ಜೆ.ಕೆ.ಸ್ಕೂಲ್ ಹತ್ತಿರ ನಿಂತ ವೇಳೆಯಲ್ಲಿ ಮೂವರು ಸ್ನೇಹಿತರ ನಡುವೆ ಬೈಕ್ ವಿಚಾರವಾಗಿ ಜಗಳ ಪ್ರಾರಂಭವಾಗಿ ಏಕಾಏಕಿ ಕಿರಣ ಮತ್ತು ಭೀಮಪ್ಪ ಸೇರಿಕೊಂಡು ಗುರುಸಿದ್ದೇಶ್ವರ ಕಾಲೋನಿಯ ರೆಹಮಾನ್ ಬೇಪಾರಿ ಮೇಲೆ ಚಾಕು ಇರಿಯಲು ಮುಂದಾಗಿದ್ದಾರೆ. ಆಗ ರೆಹಮಾನ್ ಚಾಕು ಇರಿಯಲು ಮುಂದಾದವರ ಚಾಕುವನ್ನು ಕಸಿದು ವಾಪಾಸ್ ಇಬ್ಬರಿಗೂ ಚುಚ್ಚಿದ್ದಾನೆ. ಪರಿಣಾಮ ಕಿರಣ ಕಬ್ಬೇರ, ಭೀಮಪ್ಪ ಗೊಲ್ಲರ ಎಂಬಾತರಿಗೆ ಗಾಯಗಳಾಗಿದ್ದು, ಅವರು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ನಡುವೆ ರೆಹಮಾನ್ ತಮ್ಮ ಮೇಲೆ ನಡೆದ ಹಲ್ಲೆ ಯತ್ನ ಕುರಿತು ದೂರು ನೀಡಿದ್ದು, ಈ ದೂರಿನ ಆಧಾರದ ಮೇಲೆ ಚಾಕು ಇರಿಯಲು ಮುಂದಾಗಿದ್ದ ಇಬ್ಬರು ಆರೋಪಿಗಳನ್ನು ಅಶೋಕ ನಗರದ ಪೋಲಿಸರು ಬಂಧಿಸಿದ್ದಾರೆ.
ಇನ್ನು ಈ ಘಟನಾ ಸಂಬಂಧ ಕಿರಣ ಮತ್ತು ಭೀಮಪ್ಪ ಕಡೆಯವರು ಪ್ರತಿದೂರು ನೀಡಲು ಮುಂದಾಗಿದ್ದು, ಹೀಗಾಗಿ ಚಾಕು ಇರಿದು ಗಾಯಗಳಿಸಿರುವ ರೆಹಮಾನ್ ಬೇಪಾರಿ ಎಂಬಾತನನ್ನು ಪೋಲಿಸರು ಬಂಧಿಸಲು ಮುಂದಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಒಟ್ಟಿನಲ್ಲಿ ನಗರದಲ್ಲಿ ಕ್ಷುಲ್ಲಕ ವಿಚಾರಕ್ಕೆ ಚಾಕು, ಚೂರಿ, ಹಲ್ಲೇ, ಕೊಲೆಯತ್ನ ಮಾಡುವುದು ಸರ್ವೇಸಾಮಾನ್ಯ ಎನಿಸಿದ್ದು, ಕಾನೂನು, ಪೋಲಿಸರೆಂದರೇ ಪುಡಿರೌಢಿಗಳಿಗೆ ಭಯವೇ ಇಲ್ಲದಂತಾಗಿದೆ. ಇನ್ನೂ ಮುಂದೆಯಾದರೂ ಪೋಲಿಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಮೂಲಕ ಇಂತಹ ಪುಡಿರೌಢಿಗಳಿಗೆ ಕಡಿವಾಣ ಹಾಕುವುದು ಅವಶ್ಯವಾಗಿದೆ. ಜೊತೆಗೆ ನಗರದ ಶಾಂತಿ ಕಾಪಾಡಲು ಪೋಲಿಸರು ಮುಂದಾಗಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.