ಹುಬ್ಬಳ್ಳಿ: ಮತಗಟ್ಟೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಗೌಪ್ಯವಾಗಿರಬೇಕಿದ್ದ ಲೋಕಸಭಾ ಚುನಾವಣೆಯ ಮತದಾನದ ಮಾಹಿತಿ ಬಹಿರಂಗಗೊಳ್ಳುವಂತಾಗಿದೆ. ಗೌಪ್ಯ ಮತದಾನ ಬಹಿರಂಗವಾಗಿದಲ್ಲದೆ, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಪರಿಣಾಮ ಸಖತ್ ವೈರಲ್ ಆಗಿದೆ. ಇದರಿಂದ ಚುನಾವಣಾಧಿಕಾರಿಗಳ ಕಾರ್ಯವೈಖರಿ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ ನಡೆಯುತ್ತಿದೆ.
ಮತದಾನ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವುದು
ಮತಗಟ್ಟೆಯೊಳಗೆ ಮೊಬೈಲ್, ಕ್ಯಾಮರಾ ತೆಗೆದುಕೊಂಡು ಹೋಗಿ ಮತದಾನ ಮಾಡುವ ದೃಶ್ಯ ಸೆರೆ ಹಿಡಿಯಬಾರದೆಂದು ಚುನಾವಣಾ ಆಯೋಗ ಕಟ್ಟುನಿಟ್ಟಿನ ಸೂಚಿಸಿದೆ. ಅದರಂತೆ, ಜಿಲ್ಲಾಡಳಿತವೂ ಈ ಬಗ್ಗೆ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ಕೊಟ್ಟಿತ್ತು.
ಆದಾಗ್ಯೂ, ಅಧಿಕಾರಿಗಳು ಮಾತ್ರ ತಮ್ಮ ಕರ್ತವ್ಯ ನಿರ್ವಹಿಸುವಲ್ಲಿ ವಿಫಲರಾದರು. ಗಮನಿಸಬೇಕಾದ ಅಂಶವೆಂದರೆ ವೈರಲ್ ಆಗಿರುವ ವಿಡಿಯೋದಲ್ಲಿ ವಿನೋದ್ ಅಸೂಟಿ ಪರ ಮತದಾನ ಮಾಡಿರುವುದು ಕಂಡುಬಂದಿದೆ.
ಏನಿದು ಘಟನೆ: ಇಂದು ಲೋಕಸಭಾ ಚುನಾವಣೆಯ ಎರಡನೇ ಹಂತದ ಚುನಾವಣೆ ರಾಜ್ಯದಲ್ಲಿ ನಡೆಯುತ್ತಿದೆ. ಈ ವೇಳೆ ಧಾರವಾಡ ಜಿಲ್ಲೆಯಲ್ಲಿ ಮತದಾರನೊಬ್ಬ ಮತ ಚಲಾಯಿಸಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ.
ತನ್ವೀರ್ ಟಿಎಮ್ ಎಂಬಾತನೇ ಮತದಾನ ಮಾಡಿದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದರಲ್ಲಿ ತಾನು ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ಪರವಾಗಿ ಮತ ಚಲಾವಣೆ ಮಾಡಿದ್ದೇನೆ ಎಂಬುದನ್ನು ಫೋಟೋ ವೈರಲ್ ಮಾಡುವ ಮೂಲಕ ತಿಳಿಸಿದ್ದಾನೆ. ಈ ಮೂಲಕ ಗೌಪ್ಯತೆ ಮತದಾನ ಕಾಪಾಡಿಕೊಳ್ಳದೇ ಯಡವಟ್ಟು ಮಾಡಿಕೊಂಡಿದ್ದಾನೆ. ಇದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.