ಹುಬ್ಬಳ್ಳಿ: ಛೋಟಾ ಬಾಂಬೆ ಹೆಸರಿನ ಹುಬ್ಬಳ್ಳಿಯಲ್ಲಿ ಪೊಲೀಸರ ಬಂದೂಕು ಸದ್ದು ಮಾಡಿದ್ದು, ಅಪ್ರಾಪ್ತ ಯುವತಿಯ ಮೇಲೆ ಬಲವಂತದ ಅತ್ಯಾಚಾರ ಗೈದು, ಗರ್ಭವತಿ ಮಾಡಿ ಜೀವ ಬೆದರಿಕೆ ಹಾಕಿದ್ದ ಆರೋಪಿಯನ್ನು ಬಂಧಿಸಿರುವ ನವನಗರ ಪೋಲಿಸ್ ಠಾಣೆಯ ಪೋಲಿಸರು ಸ್ಥಳ ಮಹಜರು ಮಾಡುವ ಸಂದರ್ಭದಲ್ಲಿ ತಪ್ಪಿಸಿಕೊಳ್ಳಲು ಮುಂದಾಗಿದ್ದ ಆರೋಪಿಯ ಕಾಲಿಗೆ ಫೈರಿಂಗ್ ಮಾಡಿದ್ದಾರೆ.
ಇಲ್ಲಿನ ಎಪಿಎಂಸಿಯ ಈಶ್ವರ ನಗರದ ನಿವಾಸಿ ಸದ್ದಾಂಹುಸೇನ ಲಿಂಬುವಾಲೆ ಎಂಬಾತ ಪ್ರೀತಿ ಪ್ರೇಮದ ಹೆಸರಿನಲ್ಲಿ ನವನಗರ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿನ ನಿವಾಸಿಯಾಗಿದ್ದ ಅಪ್ರಾಪ್ತ ಬಾಲಕಿಯ ಮೇಲೆ ಬಲವಂತವಾಗಿ ಅತ್ಯಾಚಾರ ಗೈದು, ಬಳಿಕ ಈ ವಿಷಯ ಬೇರೆಯಾರಿಗಾದರೂ ಹೇಳಿದರೇ ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದ, ಬಳಿಕ ಅಪ್ರಾಪ್ತೆ ಏ.29 ರಿಂದ ವಾಂತಿ ಮಾಡಲು ಪ್ರಾರಂಭ ಮಾಡಿದ್ದಾಳೆ. ಹೀಗಾಗಿ ಪೋಷಕರು ಆಸ್ಪತ್ರೆಗೆ ಕರೆದೊಯ್ದು ಸಂದರ್ಭದಲ್ಲಿ ಅಪ್ರಾಪ್ತೆ ಗರ್ಭಿಣಿಯಾಗಿರುವ ಸಂಗತಿ ಬೆಳಕಿಗೆ ಬಂದಿದೆ.
ಈ ವಿಷಯ ತಿಳಿಯುತ್ತಿದ್ದಂತೆ ಆರೋಪಿ ಸದ್ದಾಂಹುಸೇನ ಬಾಲಕಿಗೆ ಫೋನ್ ಮಾಡಿ ಜಾತಿನಿಂದನೆ ಮಾಡಿ, ಜೀವ ಬೆದರಿಕೆ ಹಾಕಿದ್ದಾನೆ. ಹೀಗಾಗಿ ಅಪ್ರಾಪ್ತ ಬಾಲಕಿಯ ಪೋಷಕರು ನವನಗರ ಪೋಲಿಸ್ ಠಾಣೆಯಲ್ಲಿ ಬಲವಂತದ ಲೈಂಗಿಕ ಸಂಭೋಗ, ಜೀವ ಬೆದರಿಕೆ, ಜಾತಿ ನಿಂದನೆ ಆರೋಪದ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ನವನಗರ ಪೋಲಿಸರು ಆರೋಪಿಯನ್ನು ಕೇವಲ ಒಂದು ಗಂಟೆ ಅವಧಿಯಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆ ಬಳಿಕ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ವಿವಿಧ ಠಾಣೆಯ ಪೋಲಿಸರ ವಿಶೇಷ ತಂಡ ರಚಿಸಿ ತನಿಖೆ ಕೈಗೊಂಡಿದ್ದ ಪೋಲಿಸರು ಸ್ಥಳ ಮಹಜರು ಮಾಡಲು ಆರೋಪಿಯನ್ನು ಕರೆದೊಯ್ದು ಸಂದರ್ಭದಲ್ಲಿ ಆರೋಪಿ ಸದ್ದಾಂಹುಸೇನ ಪೋಲಿಸರ ಮೇಲೆ ಹಲ್ಲೇ ಮಾಡಿ ತಪ್ಪಿಸಿಕೊಳ್ಳಲು ಮುಂದಾಗಿದ್ದಾನೆ. ಹೀಗಾಗಿ ಪೋಲಿಸರು ತಮ್ಮ ಆತ್ಮರಕ್ಷಣೆಗಾಗಿ ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದು, ಪರಿಣಾಮ ಸದ್ದಾಂಹುಸೇನ ಎಡಗಾಲಿಗೆ ಗಾಯವಾಗಿದೆ. ಈ ಕಾರ್ಯಾಚರಣೆಯಲ್ಲಿ ವಿದ್ಯಾಗಿರಿ ಪೋಲಿಸ್ ಠಾಣೆಯ ಇನ್ಸ್ಪೆಕ್ಟರ್ ಸಂಗಮೇಶ ದಿಂಡಿಗನಾಳ ಹಾಗೂ ಅರಣ ಗಾಯಗೊಂಡಿದ್ದಾರೆ ಎಂದು ಪೋಲಿಸ್ ಮೂಲಗಳಿಂದ ತಿಳಿದುಬಂದಿದೆ.
ಸದ್ಯ ಆರೋಪಿಗೆ ಧಾರವಾಡದ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾಮಿಸಲಾಗಿದ್ದು, ಹು-ಧಾ ಪೋಲಿಸ್ ಆಯುಕ್ತೆ ರೇಣುಕಾ ಸುಕುಮಾರ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.