ಮುಂಬೈ: ಕಳ್ಳರನ್ನು ಹಿಡಿಯಲು ಹೋಗಿದ್ದ ಪೋಲಿಸ್ ಪೇದೆಯೊಬ್ಬರಿಗೆ ಕಳ್ಳರ ಗುಂಪು ವಿಷಯುಕ್ತ ಇಂಜೆಕ್ಷನ್ ನೀಡಿದ್ದು, ಪರಿಣಾಮ ಪೋಲಿಸ ಪೇದೆ ಸಾವನ್ನಪ್ಪಿದ ಘಟನೆ ಥಾಣೆಯಲ್ಲಿ ನಡೆದಿದೆ.
ಹೌದು, ವಿಶಾಲ್ ಪವಾರ್ ಎಂಬಾತರೇ ಮೃತಪಟ್ಟ ಪೇದೆಯಾಗಿದ್ದು, ಇವರು ರಾತ್ರಿ ಪಾಳೆಯಲ್ಲಿ ಕರ್ತವ್ಯ ನಿರ್ವಹಿಸಲು ತೆರಳುತ್ತಿದ್ದಾಗ ಇಲ್ಲಿನ ರೈಲ್ವೇ ಸ್ಟೇಷನ್‌ನಲ್ಲಿ ನಿಂತಿದ್ದಾರೆ. ಈ ವೇಳೆ ಕರೆ ಬಂದ ಹಿನ್ನೆಲೆಯಲ್ಲಿ ಫೋನ್ ಸಂಭಾಷಣೆಯಲ್ಲಿದ್ದಾಗ ಅಪರಿಚಿತನೊಬ್ಬ ಪೇದೆಯ ಫೋನ್ ಕದ್ದು ರೈಲ್ವೇ ಹಳಿ ಮೂಲಕ ಓಡಿದ್ದಾನೆ.
ತದನಂತರ ಕಳ್ಳನನ್ನು ಹಿಡಿಯಲು ಪೋಲಿಸ ಪೇದೆ ಹಿಂಬಾಲಿಸಿಕೊಂಡು ಓಡಿದ್ದಾರೆ. ಆದರೆ ಸ್ವಲ್ಪ ದೂರದಲ್ಲಿ ಕಳ್ಳರ ಗ್ಯಾಂಗ್‌ವೊಂದು ಪೊಲೀಸ್ ಪೇದೆ ಮೇಲೆ ಏಕಾಏಕಿ ದಾಳಿ ಮಾಡಿ, ವಿಷಯುಕ್ತ ಚುಚ್ಚುಮದ್ದನ್ನು ನೀಡಿದ್ದಾರೆ.
ಪರಿಣಾಮ ಪೇದೆ ವಿಶಾಲ ತೀವ್ರವಾಗಿ ಅಸ್ವಸ್ಥಗೊಂಡಿದ್ದು, ಇವರನ್ನು ಥಾಣೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಕಳೆದ ಮೂರು ದಿನಗಳ ಕಾಲ ಜೀವನ್ಮರಣ ಹೋರಾಟದಲ್ಲಿದ್ದ ಪೋಲಿಸ್ ಪೇದೆ ಬುಧವಾರ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.