ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಭರ್ಜರಿ ಪ್ರಚಾರ ಕಾರ್ಯ ನಡೆಸುತ್ತಿದೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಈಗಾಗಲೇ ಕ್ಷೇತ್ರದಾದ್ಯಂತ ಕಾಲಿಗೆ ಚಕ್ರಕಟ್ಟಿಕೊಂಡಂತೆ ಸಭೆ, ಸಮಾರಂಭ, ರ್ಯಾಲಿಗಳ ಮೂಲಕ ಮತಯಾಚನೆ ಮಾಡುತ್ತಿದ್ದಾರೆ. ಆದರೆ ಶಿಗ್ಗಾಂವಿ ಕ್ಷೇತ್ರದಲ್ಲಿ ಪ್ರಚಾರ ನಡೆಸುವ ಸಂದರ್ಭದಲ್ಲಿ ಕೇಂದ್ರ ಸಚಿವರಿಗೆ ಜನರಿಂದ ಪ್ರತಿಭಟನೆ ಬಿಸಿ ತಟ್ಟಿದೆ.
ಹೌದು, ವನಹಳ್ಳಿ ಗ್ರಾಮದಲ್ಲಿ ಬಹಿರಂಗವಾಗಿ ಭಾಷಣ ಮಾಡುವ ವೇಳೆ ಗ್ರಾಮದ ಕೆಲ ಯುವಕರು ಪ್ರಲ್ಹಾದ್ ಜೋಶಿ ಭಾಷಣಕ್ಕೆ ಅಡ್ಡಿ ಉಂಟು ಮಾಡಿದ್ದಾರೆ. ಸುದೀರ್ಘ ಕಾಲ ಧಾರವಾಡ ಲೋಕಸಭಾ ಕ್ಷೇತ್ರದ ಸಂಸದರಾಗಿ ನಮ್ಮ ಗ್ರಾಮಕ್ಕೆ ಏನೂ ಕೊಡುಗೆ ಕೊಟ್ಟಿದ್ದೀರಿ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಕೇಂದ್ರ ಸಚಿವರ ವಿರುದ್ಧ ದಿಕ್ಕಾರ ಕೂಗಿ, ಪ್ರತಿಭಟನೆ ನಡೆಸಿದ ವಿಡಿಯೋ…
ಇದೇ ವೇಳೆ ಪ್ರಲ್ಹಾದ್ ಜೋಶಿ ಜಲಜೀವನ್ ಮಿಷನ್ ಸೇರಿದಂತೆ ಹಲವಾರು ಯೋಜನೆಗಳ ಮೂಲಕ ಕೋಟ್ಯಾಂತರ ರೂಪಾಯಿ ಅನುದಾನ ನೀಡಿದ್ದೇವೆ ಎಂದಿದ್ದಾರೆ. ಈ ಮಾತಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಗ್ರಾಮದ ಯುವಕರು ನಿಮ್ಮ ಅನುದಾನ ಎಲ್ಲಿ ಬಂದಿದೆ? ಯಾರ ಅಭಿವೃದ್ಧಿ ಮಾಡಿದ್ದೀರಿ? ಎಂದು ಕೇಂದ್ರ ಸಚಿವರ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು.
ಇದೇ ವೇಳೆ ಕೇಂದ್ರ ಸಚಿವರು ತಮ್ಮ ಭಾಷಣವನ್ನು ಮುಂದುವರೆಸಿದರು ಸಹ ಯುವಕರು ಮಾತ್ರ ತಮ್ಮ ಪಟ್ಟು ಬಿಡದೇ ಪ್ರಚಾರಕ್ಕೆ ಅಡ್ಡಿಯುಂಟು ಮಾಡಿದ್ದಾರೆ. ಈ ವೇಳೆ ಬಿಜೆಪಿ ಕಾರ್ಯಕರ್ತರು ಯುವಕರನ್ನು ಒತ್ತಾಯ ಪೂರ್ವಕವಾಗಿ ಎಳೆದುಕೊಂಡು ಸಮಾಧಾನ ಪಡಿಸಲು ಮುಂದಾಗಿದ್ದಾರೆ.
ಇದರಿಂದ ಗ್ರಾಮದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಈ ಘಟನೆಯಿಂದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕೆಲಕಾಲ ಮುಜುಗರಕ್ಕೆ ಒಳಗಾದರು.
ಈ ಒಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾಕಷ್ಟು ಪರ-ವಿರೋಧ ಚರ್ಚೆಗೆ ಕಾರಣವಾಗುತ್ತಿದೆ.