ಹುಬ್ಬಳ್ಳಿ; ದೇಶಕ್ಕೆ ಮಾದರಿಯಾದ ಕರ್ನಾಟಕ ಮಾಡೆಲ್ (ಕಾಂಗ್ರೆಸ್ ಗ್ಯಾರಂಟಿ) ಹಾಗೂ ಬಿಜೆಪಿಯ ಚೊಂಬು ಮಾಡೆಲ್ ನಡುವೆಯಷ್ಟೇ ಈ ಬಾರಿ ರಾಜ್ಯದಲ್ಲಿ ಚುನಾವಣಾ ಹಣಾಹಣಿ ನಡೆದಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಖಾಸಗಿ ಹೊಟೆಲ್’ನಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.
ನಗರದ ಖಾಸಗಿ ಹೊಟೆಲ್’ನಲ್ಲಿ ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಅನುಷ್ಠಾನಗೊಳಿಸಿದ ಒಂದೊಂದು ಗ್ಯಾರಂಟಿಯಿಂದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 40 ರಿಂದ 45 ಸಾವಿರ ಜನರಿಗೆ ಲಾಭ ದೊರೆತಿದೆ. ಗೃಹ ಲಕ್ಷ್ಮಿ: 1.20 ಕೋಟಿ ಮಹಿಳೆಯರು, ಗೃಹ ಜ್ಯೋತಿ: 1.18ಕೋಟಿ ಕುಟುಂಬ, ಶಕ್ತಿ: 195 ಕೋಟಿ ಜನರ ಓಡಾಟ (ಪ್ರತಿ ದಿನ 35 ಲಕ್ಷ ಮಹಿಳೆಯರು), ಅನ್ನ ಭಾಗ್ಯ: 4.49 ಕೋಟಿ ಜನರಿಗೆ ಹಣ ವರ್ಗಾವಣೆಯಾಗಿದೆ ಎಂದು ಹೇಳಿದರು.
1.50 ಲಕ್ಷ ಯುವ ಪದವೀಧರರಿಗೆ ಯುವ ನಿಧಿ ಸಹಿತ ಮಧ್ಯವರ್ತಿಗಳಿಲ್ಲದೆ ವಾರ್ಷಿಕ 58,000 ಕೋಟಿ ರೂ. ವರ್ಗಾವಣೆಯಾಗಲಿದೆ. ರಾಜ್ಯದ ಮೂರು ಕೋಟಿ ಜನರಿಗೆ ವಾರ್ಷಿಕ 1.20ಲಕ್ಷ ರೂ. ಆದಾಯ ದೊರೆಯಲಿದೆ. ಗ್ರಾಮೀಣ, ನಗರ ಜನ ಜೀವನದಲ್ಲಿ ಸುಧಾರಣೆಯಾಗಿದ್ದರೆ ಪ್ರಧಾನಿ ಮೋದಿ ಗ್ಯಾರಂಟಿ ಯೋಜನೆ ನಕಲು ಮಾಡಿದ್ದಾರೆ ಎಂದು ಕುಟುಕಿದರು.
ರಾಜ್ಯಕ್ಕೆ ಕೇಂದ್ರ ಸರಕಾರ ಬರ ಪರಿಹಾರ, ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ನೀಡಿಲ್ಲ, ಮಹದಾಯಿ ಅನುಷ್ಠಾನಗೊಳಿಸುವ ಬದಲು ಚೊಂಬು ನೀಡಿದೆ. ವರ್ಷಕ್ಕೆ 2 ಕೋಟಿ ಉದ್ಯೋಗ, ರೈತರ ಆದಾಯ ದುಪ್ಪಟ್ಟು ಹೀಗೆ ರಾಜ್ಯ ಮಾತ್ರವಲ್ಲ ದೇಶದ ಜನತೆಗೆ ಬಿಜೆಪಿ ಚೊಂಬನ್ನಷ್ಟೇ ನೀಡಿದೆ ಎಂದು ಹರಿಹಾಯ್ದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಎನ್.ಹೆಚ್.ಕೊನರೆಡ್ಡಿ, ವಿಪ ಸದಸ್ಯ ಸಲೀಂ ಅಹ್ಮದ್, ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿ, ಮಾಜಿ ಶಾಸಕಿ ಕುಸುಮಾವತಿ ಶಿವಳ್ಳಿ ಸೇರಿದಂತೆ ಮುಂತಾದವರು ಇದ್ದರು.