ಧಾರವಾಡ : ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ರಾಜಕೀಯ ರಂಗು ಹೆಚ್ಚುತ್ತಿದ್ದು, ಈ ನಡುವೆ ಶಿರಹಟ್ಟಿಯ ಫಕೀರೇಶ್ವರ ಮಠದ ದಿಂಗಾಲೇಶ್ವರ ಸ್ವಾಮೀಜಿ ಧಾರವಾಡ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ.
ಶ್ರೀಗಳು ಈ ವೇಳೆ 9.74 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ. ಇದರಲ್ಲಿ 1.22 ಕೋಟಿ ರೂ. ಚರಾಸ್ತಿಯಾಗಿದ್ದರೆ, 8.52 ಕೋಟಿ ರೂ. ಸ್ಥಿರಾಸ್ತಿಯನ್ನು ಘೋಷಿಸಿದ್ದಾರೆ. ವಿವಿಧ ಕಡೆ 39.68 ಲಕ್ಷ ರೂ. ಸಾಲವನ್ನು ದಿಂಗಾಲೇಶ್ವರ ಸ್ವಾಮೀಜಿ ಹೊಂದಿದ್ದು, ಮೂರು ಪ್ರಕರಣಗಳು ಸ್ವಾಮೀಜಿ ಮೇಲೆ ಇವೆ ಎಂದು ನಾಮಪತ್ರ ಅಫಿಡವಿಟ್ನಲ್ಲಿ ತಿಳಿಸಿದ್ದಾರೆ.
ದಿಂಗಾಲೇಶ್ವರ ಸ್ವಾಮೀಜಿ ಅವರೇ ಘೋಷಿಸಿಕೊಂಡಂತೆ ಅವರ ಕೈಯಲ್ಲಿ ಸದ್ಯ 1 ಲಕ್ಷದ 25 ಸಾವಿರ ರೂ. ನಗದು ಇದೆ. ವಿವಿಧ ಬ್ಯಾಂಕ್ ಖಾತೆಗಳಲ್ಲಿ 11 ಲಕ್ಷಕ್ಕೂ ಅಧಿಕ ಹಣ ಇದೆ. ಸುಮಾರು 4.75 ಲಕ್ಷ ರೂ. ಮೌಲ್ಯದ ಶೇರುಗಳು ಹಾಗೂ ಬಾಂಡ್ಗಳನ್ನು ವಿವಿಧ ಸಹಕಾರಿ ಬ್ಯಾಂಕ್ಗಳಲ್ಲಿ ಹೊಂದಿದ್ದಾರೆ. ಇದಲ್ಲದೇ ಎರಡು ಟೊಯೊಟೋ ಇನೋವಾ ಕಾರು, ಒಂದು ಟ್ರಾಕ್ಟರ್ ಹಾಗೂ ಒಂದು ಬಸ್ ಅನ್ನು ಹೊಂದಿದ್ದಾರೆ.
ಜೊತೆಗೆ 4.35 ಲಕ್ಷ ರೂ. ಮೌಲ್ಯದ 7 ಕೆಜಿ 820 ಗ್ರಾಂ ಬೆಳ್ಳಿ ಹೊಂದಿದ್ದು, 1,17 ಲಕ್ಷ ರೂ. ಮೌಲ್ಯದ 18.9 ಗ್ರಾಂ ಚಿನ್ನವನ್ನು ಹೊಂದಿದ್ದಾರೆ. ಈ ಮೂಲಕ ಒಟ್ಟು 1.22 ಕೋಟಿ ರೂ. ಚರಾಸ್ತಿಯನ್ನು ದಿಂಗಾಲೇಶ್ವರ ಸ್ವಾಮೀಜಿ ಘೋಷಿಸಿಕೊಂಡಿದ್ದಾರೆ.
ಇನ್ನು ಸ್ಥಿರಾಸ್ತಿಯನ್ನು ಗಮನಿಸಿದರೆ, 23 ಎಕರೆ 17 ಗುಂಟೆ ಕೃಷಿ ಭೂಮಿಯನ್ನು ಹೊಂದಿದ್ದು, 19 ಕಡೆ ಕೃಷಿಯೇತರ ಭೂಮಿ ಹೊಂದಿದ್ದಾರೆ. ಜೊತೆಗ ಶಾಲಾ ಕಟ್ಟಡ ಕೂಡ ಇದ್ದು, ಒಟ್ಟು, 8.52 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಯನ್ನು ಹೊಂದಿದ್ದಾರೆ.
ದಿಂಗಾಲೇಶ್ವರ ಸ್ವಾಮೀಜಿ ವಿರುದ್ಧ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ವಿರುದ್ಧ ಮೂರು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು, ಮೂರು ಕೂಡ ಜಾತಿ ನಿಂದನೆ ಹಾಗೂ ಹಲ್ಲೆ ನಡೆಸಿರುವುದಕ್ಕೆ ಸಂಬಂಧಿಸಿವೆ.
ದಿಂಗಾಲೇಶ್ವರ ಸ್ವಾಮೀಜಿ ತಮ್ಮ ಅಫಿಡವಿಟ್ನಲ್ಲಿ ತಾವು ಎಸ್ಎಸ್ಎಲ್ಸಿ ಅನುತ್ತೀರ್ಣಗೊಂಡಿದ್ದೇವೆ ಎಂದು ತಿಳಿಸಿದ್ದಾರೆ.