ಹುಬ್ಬಳ್ಳಿ: ಬಸ್ಸನ್ನು ಹತ್ತುವ ಆತುರದಲ್ಲಿ ಆಟೋದಲ್ಲಿ ಬಿಟ್ಟು ಹೋಗಿದ್ದ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ, ದಾಖಲೆಗಳಿದ್ದ ಬ್ಯಾಗ್’ನ್ನು ವಾಪಾಸ್ ಪ್ರಯಾಣಿಕರಿಗೆ ಕೊಡಿಸುವಲ್ಲಿ ಗೋಕುಲರೋಡ್ ಪೋಲಿಸ್ ಠಾಣೆಯ ಪೋಲಿಸರು ಯಶಸ್ವಿಯಾಗಿದ್ದಾರೆ.
ಹೌದು, ಧಾರವಾಡದ ನಿಸ್ಸಾಂಹುದ್ದಿನ್ ಕಾಲೋನಿಯ ಮಹಿಳೆಯೊಬ್ಬರು ಮಂಗಳವಾರ ಮಧ್ಯಾಹ್ನ ಹುಬ್ಬಳ್ಳಿಯ ಗೋಕುಲರಸ್ತೆಯ ಹೊಸ ಬಸ್ ನಿಲ್ದಾಣದ ಹೊರಗಡೆಯಿಂದ ಹೊಸೂರಿನ ಬಸ್ ನಿಲ್ದಾಣಕ್ಕೆ ಆಟೋ ಒಂದರಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಬಸ್ಸನ್ನು ಹಿಡಿಯುವ ಆತುರದಲ್ಲಿ ಆಟೋದಲ್ಲಿಯೇ ತನ್ನ ಬ್ಯಾಗ್ ಬಿಟ್ಟು ಇಳಿದು ಹೋಗಿದ್ದರು.
ಆ ಬಳಿಕ ಬ್ಯಾಗ್ ಇಲ್ಲದೇ ಇರುವುದು ಗಮನಕ್ಕೆ ಬಂದ ಕೂಡಲೇ ವಾಪಾಸ್ ಗೋಕುಲರಸ್ತೆಯ ಪೋಲಿಸ್ ಠಾಣೆಗೆ ಬಂದು ಬ್ಯಾಗ್ ಆಟೋದಲ್ಲಿಯೇ ಬಿಟ್ಟು ಇಳಿದಿರುವ ಮಾಹಿತಿ ನೀಡಿದ್ದಾರೆ.
ಬಳಿಕ ಠಾಣೆಯ ಸಿಬ್ಬಂದಿ ಸುರೇಶ ಕೋಲಿ ಹಾಗೂ ಮತ್ತವರ ಸಿಬ್ಬಂದಿ ಇನ್ಸ್ಪೆಕ್ಟರ್ ಪ್ರವೀಣ ನಿಲ್ಲಮ್ಮನವರ ಅವರ ಮಾರ್ಗದರ್ಶನದಲ್ಲಿ ತನಿಖೆ ಕೈಗೊಂಡು ಆಟೋ ಪತ್ತೆಯನ್ನು ಮಾಡಿದ್ದಾರೆ. ಆಗ ಆಟೋ ನಾಗರಾಜ ಮೇಗುಂಡಿ ತನ್ನ ಆಟೋದಲ್ಲಿ ಬ್ಯಾಗ್ ಇರುವುದನ್ನು ಗಮನಿಸಿದ್ದಾನೆ.
ಅದರಂತೆ ಇಂದು 40 ಗ್ರಾಂ ಬಂಗಾರದ ಆಭರಣ, 200 ಗ್ರಾಂ ಚಿನ್ನ, 10 ಸಾವಿರ ನಗದು ಹಣ ಸೇರಿದಂತೆ ಮನೆಯ ದಾಖಲೆ ಪತ್ರಗಳಿದ್ದ ಬ್ಯಾಗ್’ನ್ನು ಗೋಕುಲರೋಡ್ ಪೋಲಿಸ್ ಠಾಣೆಯ ಪೋಲಿಸರು ಬ್ಯಾಗ್ ಕಳೆದುಕೊಂಡ ಮಹಿಳೆಯನ್ನು ಕರೆಯಿಸಿ ವಾಪಾಸ್ ಕೊಟ್ಟು ಕಳಿಸಿದ್ದಾರೆ. ಇದೀಗ ಆಟೋ ಚಾಲಕನ ಮಾನವೀಯ ಗುಣಕ್ಕೆ ಪೋಲಿಸರು ಹಾಗೂ ಹುಬ್ಬಳ್ಳಿ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ,ಆಟೋ ಚಾಲಕರ ಸಂಘದ ಅಧ್ಯಕ್ಷ ಶೇಕರಯ್ಯಾ ಮಠಪತಿ, ಇನ್ಸ್ಪೆಕ್ಟರ್ ಪ್ರವೀಣ ನಿಲ್ಲಮ್ಮನವರ,
ಪಿಎಸ್ಐ ದೇವೆಂದ್ರ, ಎಎಸ್ಐ ಜಿ.ಸಿ.ರಜಪೂತ, ಸಿಬ್ಬಂದಿಗಳಾದ ಚಂದ್ರ ನಡುವಿನಮನಿ, ವಸಂತ ಗುಡಗೇರಿ, ರಾಜು ಹೊಂಕಣ್ಣ, ಶರಣು ಕೋರಿ, ಮಹೇಶ ಬೆನ್ನೂರು ಸೇರಿದಂತೆ ಮತ್ತಿತರರು ಇದ್ದರು.