ಧಾರವಾಡ: ಕೇಂದ್ರ ಸಚಿವ ಪ್ರಲಾದ ಜೋಶಿ ಆಸ್ತಿ ಐದು ವರ್ಷದಲ್ಲಿ ದುಪ್ಪಟ್ಟಾಗಿದ್ದು, ಇವರ ಕುಟುಂಬದ ಆಸ್ತಿ 11.13 ಕೋಟಿಯಿಂದ 21,09,60,953 ರೂ ಗೆ ಏರಿಕೆ ಆಗಿದೆ. ಇಲ್ಲಿ ಜೋಶಿ ಅವರು ಪತ್ನಿಯಿಂದ 2.44 ಕೋಟಿ ರೂ. ಮುಂಗಡ ಸಾಲ ಪಡೆದು ಪುತ್ರಿಗೆ 1.20 ಕೋಟಿ ರೂ. ಸಾಲ ಕೊಟ್ಟಿದ್ದಾರೆ.
ಸಚಿವ ಜೋಶಿ, ಪತ್ನಿ ಜ್ಯೋತಿ ಜೋಶಿ ಹಾಗೂ ಪುತ್ರಿ ಅನನ್ಯ ಸೇರಿ ಕುಟುಂಬವು ಒಟ್ಟು 8.98 ಕೋಟಿ ರೂ. ಚರಾಸ್ತಿ ಹಾಗೂ 12.11 ಕೋಟಿ ರೂ. ಸ್ಥಿರಾಸ್ತಿಯ ಮಾಲೀಕತ್ವ ಹೊಂದಿದ್ದಾರೆ. ಈ ಬಗ್ಗೆ ಜೋಶಿ ಅವರು ನಾಮಪತ್ರದೊಂದಿಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.
ಸಚಿವ ಜೋಶಿ ಅವರ ಹೆಸರಿನಲ್ಲಿ ಒಟ್ಟು 2.72 ಕೋಟಿ ರೂ.ಮೌಲ್ಯದ ಚರಾಸ್ತಿ ಇದೆ. 1 ಲಕ್ಷ ರೂ.ನಗದು ಇದ್ದು, ಎಸ್‌ಬಿಐ ದೆಹಲಿ ಬ್ಯಾಂಕಿನ ಎರಡು ಖಾತೆಗಳಲ್ಲಿ 12.88 ಲಕ್ಷ ರೂ. ಆಂಧ್ರ ಬ್ಯಾಂಕಿನಲ್ಲಿ 1 ಲಕ್ಷ
ರೂ., ಕೆನರಾ ಬ್ಯಾಂಕಿನಲ್ಲಿ 6 ಸಾವಿರ ರೂ., ಬ್ಯಾಂಕ್ ಆಫ್ ಬರೋಡಾದಲ್ಲಿ 94 ಸಾವಿರ ರೂ. ಠೇವಣಿ ಇಟ್ಟಿದ್ದಾರೆ.
ವಿವಿಧ ಕಂಪನಿಗಳಲ್ಲಿ 36 ಲಕ್ಷ ಮೌಲ್ಯದ ಷೇರುಗಳನ್ನು ಹೊಂದಿದ್ದಾರೆ. 21 ಲಕ್ಷ ರೂ.ಮೌಲ್ಯದ ಜೀವ ವಿಮೆ ಪಾಲಿಸಿ ಹೊಂದಿದ್ದಾರೆ. ಪೋಸ್ಟಲ್ ಸೇರಿದಂತೆ ವಿವಿಧ ಕಡೆಗಳಲ್ಲಿ ಉಳಿತಾಯ ಖಾತೆಗಳಿವೆ.ಹಾಗೆಯೇ ಮಗಳು ಅರ್ಪಿತಾ ಜೋಶಿ ಅವರಿಗೆ ಜೋಶಿ ಅವರೇ 1.20 ಕೋಟಿ ರೂ. ಮುಂಗಡ ನೀಡಿದ್ದಾರೆ. 184 ಗ್ರಾಂ ಚಿನ್ನ, 5 ಕೆ.ಜಿ. ಬೆಳ್ಳಿ ಇದೆ. ಜೋಶಿ ಅವರ ಹೆಸರಿನಲ್ಲಿ ಹುಬ್ಬಳ್ಳಿ ಕೇಶ್ವಾಪುರದಲ್ಲಿ 2.64 ಕೋಟಿ ರೂ. ಮೌಲ್ಯದ ಹಾಗೂ ಬೆಂಗಳೂರಿನ ಸರ್ಜಾಪುರ ರಸ್ತೆಯಲ್ಲಿ 2.50 ಕೋಟಿ ರೂ. ಮೌಲ್ಯದ ಕೃಷಿಯೇತರ ನಿವೇಶನಗಳಿವೆ.
ಹುಬ್ಬಳ್ಳಿ ಭವಾನಿನಗರದ ಮಯೂರಿ ಎಸ್ಟೇಟ್‌ನಲ್ಲಿ 2.80 ಕೋಟಿ ರೂ. ಹಾಗೂ ಬೆಂಗಳೂರು ಮಲ್ಲೆಶ್ವರಂನಲ್ಲಿ 3.19 ಕೋಟಿ ರೂ. ಮೌಲ್ಯದ ಗೃಹಕಟ್ಟಡಗಳಿವೆ. ಒಟ್ಟು 6.63 ಕೋಟಿ ರೂ. ಸಾಲ ಸಚಿವ ಜೋಶಿ ಅವರ ಹೆಸರಿನಲಿದೆ.
ಪತಿಗಿಂತ ದುಪ್ಪಟ್ಟು ಚರಾಸ್ತಿ: ಸಚಿವ ಪ್ರಹ್ಲಾದ ಜೋಶಿ ಅವರ ಪತ್ನಿ ಜ್ಯೋತಿ ಜೋಶಿ ಅವರು ತಮ್ಮ ಪತಿಗಿಂತ ಎರಡು ಪಟ್ಟು ಹೆಚ್ಚು ಚರಾಸ್ತಿ ಹೊಂದಿದ್ದಾರೆ. ಒಟ್ಟು 5,93,88,574 ರೂ ಮೌಲ್ಯದ ಚರಾಸ್ತಿ ಇದೆ. ಈ ಪೈಕಿ 1.10 ಲಕ್ಷ ರೂ. ನಗದು, ವಿವಿಧ ಬ್ಯಾಂಕ್‌ಗಳಲ್ಲಿ ಉಳಿತಾಯ ಖಾತೆಯಲ್ಲಿ 77.36 ಲಕ್ಷ ರೂ.ಹಣವಿದೆ. ವಿವಿಧ ಕಂಪನಿಗಳಲ್ಲಿ 1.21 ಕೋಟಿ ರೂ. ಮೌಲ್ಯದ ಷೇರುಗಳಿವೆ. 2022ರಲ್ಲಿ ಅಂಚಟಗೇರಿ ಗ್ರಾಮದ 4.8 ಎಕರೆ ಕೃಷಿ ಭೂಮಿ ಖರೀದಿಸಿದ್ದಾರೆ. 500 ಗ್ರಾಂ ಬಂಗಾರ, 1.5 ಲಕ್ಷ ರೂ.ಮೌಲ್ಯದ ಬೆಳ್ಳಿ ಇದೆ. ಆದರೆ ಇದೇ ವೇಳೆ ಜ್ಯೋತಿ ಜೋಶಿ ಅವರು ತಮ್ಮ ಪತಿ ಪ್ರಹ್ಲಾದ ಜೋಶಿ ಅವರಿಗೆ 2.44 ಕೋಟಿ ರೂ. ಕೈ ಸಾಲ ನೀಡಿದ್ದಾರೆ. ಅಲ್ಲದೇ ಮಗಳು ಅರ್ಪಿತಾ ಜೋಶಿ ಅವರಿಗೆ 2 ಲಕ್ಷ ರೂ. ಕೈಸಾಲ ನೀಡಿದ್ದಾರೆ. ಇವರ ಹೆಸರಿನಲ್ಲಿ ಒಟ್ಟು 1.37 ಕೋಟಿ ಸಾಲವಿದೆ.
ಹೀಗೆ ಸಚಿವ ಜೋಶಿ ಕುಟುಂಬ ಒಟ್ಟು 8,98,37,988 ರೂ ಚರಾಸ್ತಿ 12,11,22,965 ಸ್ಥಿರಾಸ್ತಿ ಸೇರಿದಂತೆ ಒಟ್ಟು 21,09,60,953 ರೂ ಮೌಲ್ಯದ ಆಸ್ತಿಯ ಒಡೆತನ ಹೊಂದಿದೆ. ಹಾಗೆಯೇ 8,01,23,332 ರೂ. ಸಾಲ ಹೊಂದಿದ್ದಾರೆ. ಇವರಾರೂ ಸ್ವಂತ ವಾಹನ ಹೊಂದಿಲ್ಲ ಎಂದು ಅಪಿಡ್‌ವಿಟ್‌ನಲ್ಲಿ ತಿಳಿಸಿದ್ದಾರೆ.