ಹುಬ್ಬಳ್ಳಿ: ಹುಬ್ಬಳ್ಳಿ ಹೊರವಲಯದಲ್ಲಿ ಭೀಕರ ರಸ್ತೆ ಅಪಘಾತ ಜರುಗಿದ್ದು, ಅಪಘಾತದಲ್ಲಿ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿ, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ.
ಹೌದು, ಕಾರವಾರ ರಸ್ತೆಯ ಅಂಚಟಗೇರಿ ಬಳಿಯಲ್ಲಿ ಕಾರು ಮತ್ತು ಬಸ್ಸಿನ ನಡುವೆ ಸೋಮವಾರ ತಡರಾತ್ರಿ ಮುಖಾಮುಖಿ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ನಾಲ್ವರ ಪೈಕಿ ಮೂವರು ಅಸುನೀಗಿದ್ದಾರೆ. ಓರ್ವನಿಗೆ ಬಲಗೈಗೆ ಗಾಯವಾಗಿದೆ.
ಅಪಘಾತದಲ್ಲಿ ನಜ್ಜುಗುಜ್ಜಾರಿರುವ ಕಾರು & ಬಸ್ಸು
ಮೃತರನ್ನು ತೆಲಂಗಾಣ ಜಿಲ್ಲೆಯ ಉಪ್ಪಲ್ ಜಿಲ್ಲೆಯವರು ಎಂದು ಗುರುತಿಸಲಾಗಿದೆ. ಇವರು ವೈಯಕ್ತಿಕ ಕೆಲಸದ ನಿಮಿತ್ತವಾಗಿ ರಾಜ್ಯಕ್ಕೆ ಬಂದ ವೇಳೆ ಈ ದುರ್ಘಟನೆ ನಡೆದಿದೆ. ಘಟನೆಯಲ್ಲಿ ಫಾರ್ಚುನರ್ ಕಾರು ಸಂಪೂರ್ಣವಾಗಿ ಜಖಂಗೊಂಡಿದೆ. ಬಸ್ಸಿನ ಮುಂಭಾಗ ಸಹಿತ ನಜ್ಜುಗುಜ್ಜಾಗಿದೆ.
ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೋಲಿಸರು ಭೇಟಿ ನೀಡಿದ್ದು, ಮೃತರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದು, ಗಾಯಗೊಂಡ ಸೀತಾರಾಮ ಪಲ್ಲೇ ಎಂಬಾತನಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಸಂಬಂಧ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.