ದಿನವಾಣಿ ವಾರ್ತೆ
ಶಿವಮೊಗ್ಗ: ಮಟ್ಕಾ (ಓಸಿ) ದಂಧೆ ನಡೆಸಲು ಸಹಕರಿಸಬೇಕಾದರೆ ಹಣ ನೀಡಬೇಕು ಎಂದು ಹಣಕ್ಕೆ ಬೇಡಿಕೆ ಇಟ್ಟಿದ್ದ ಎಎಸ್ಐ ಒಬ್ಬರು ಹಣ ಪಡೆಯುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರ ಬಲೆಗೆ ಹೆಡ್ ಗ
ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ.
ಶಿವಮೊಗ್ಗದ (ಸಿಇಎನ್) ಸೈಬರ್ ಕ್ರೈಂ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸ್ಪೆಕ್ಟರ್ (ಎಎಸ್ಐ) ಆಗಿ ಕರ್ತವ್ಯ ನಿರ್ವಹಿಸುತ್ತಿರುವ ರೆಹಮಾನ್ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಯಾಗಿದ್ದಾರೆ.
ಇವರು ಶುಕ್ರವಾರ ಶಿವಮೊಗ್ಗದ ಆರ್.ಎಂ.ಎಲ್. ನಗರದಲ್ಲಿರುವ ಅವರ ಮನೆಯ ಬಳಿಯೇ ರಫಿಕ್ ಎಂಬುವರಿಂದ 1 ಲಕ್ಷ ರೂ. ಲಂಚ ಪಡೆಯುತ್ತಿರುವ ವೇಳೆ ದಾಖಲೆ ಸಮೇತ ಎಎಸ್ಐ ರೆಹಮಾನ್ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಲೋಕಾಯುಕ್ತದ ಚಿತ್ರದುರ್ಗ ಎಸ್.ಪಿ. ವಾಸುದೇವ್ ನೇತೃತ್ವದಲ್ಲಿ ಈ ಒಂದು ಕಾರ್ಯಾಚರಣೆ ನಡೆದಿದ್ದು, ಮಟ್ಕಾ ದಂಧೆ ನಡೆಸುವವರಿಂದ 1,20,000 ರೂ. ಹಣಕ್ಕೆ ಎಎಸ್ಐ ಮೊಹಮ್ಮದ್ ರೆಹಮಾನ್ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಅದರಂತೆ, ಶುಕ್ರವಾರ 1 ಲಕ್ಷ ರೂ. ಹಣ ಲಂಚ ಪಡೆಯುವ ವೇಳೆ ಲೋಕಾಯುಕ್ತ ಅಧಿಕಾರಿಗಳು ಎಪಿಎಂಸಿಯಲ್ಲಿ ಕೆಲಸ ಮಾಡುವ ಹಮಾಲರಂತೆ ಬಂದು ದಾಳಿ ನಡೆಸಿದ್ದಾರೆ.
ಇನ್ನು ಶಿವಮೊಗ್ಗ ಜಿಲ್ಲಾ ಲೋಕಾಯುಕ್ತ ಸಿಬ್ಬಂದಿ ಹಾಗೂ ಸ್ಥಳೀಯ ಪೋಲಿಸ್ ಸಿಬ್ಬಂದಿ ಮೊಹಮ್ಮದ್ ರೆಹಮಾನ್ ಅವರಿಗೆ ಪರಿಚಯಸ್ಥರು ಎಂಬ ಕಾರಣದಿಂದ ಚಿತ್ರದುರ್ಗದ ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆಂದು ಲೋಕಸಭಾ ಎಸ್ಪಿ ವಾಸುದೇವರಾಮ್ ದಿನವಾಣಿಗೆ ತಿಳಿಸಿದ್ದಾರೆ.
ನಗರದಲ್ಲಿ ನಡೆಯುತ್ತಿರುವ ಅಕ್ರಮ ದಂಧೆಗಳಾದ ಓಸಿ, ಮಟ್ಕಾ ದಂಧೆಗಳಲ್ಲಿ ಪೊಲೀಸರ ಶಾಮೀಲು ಆರೋಪ ಕೇಳಿ ಬರುತ್ತಿತ್ತು, ಇದೀಗ ಪೊಲೀಸ್ ಅಧಿಕಾರಿಯೇ ವಶಕ್ಕೆ ಸಿಕ್ಕಿಬಿದ್ದಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ. ಹೀಗಾದರೇ ಜನಸಾಮಾನ್ಯರ ಗತಿ ಏನು ಎಂಬ ಪ್ರಶ್ನೆಯನ್ನು ಪ್ರಜ್ಞಾವಂತರು ಮಾಡುವಂತಾಗಿದೆ.