ಹುಬ್ಬಳ್ಳಿ: ಲೋಕಸಭಾ ಚುನಾವಣೆ ಕಾವು ದೇಶದಾದ್ಯಂತ ವ್ಯಾಪಿಸಿದೆ. ಈ ಬೆನ್ನಲ್ಲೇ ರೈತ ಮುಖಂಡರೊಬ್ಬರು ಇವಿಎಂ (ವಿದ್ಯುನ್ಮಾನ ಮತಯಂತ್ರಗಳಲ್ಲಿ ನೋಟಾ) ಎಂದು ಬರೆಯುವ ಬದಲು ರೈತರ ಬಾರಕೋಲು ಚಿಹ್ನೆಯನ್ನು (ಚಿತ್ರ) ಬಳಸುವಂತೆ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.
ಹೌದು, ಇಂತಹದೊಂದು ಹೋರಾಟಕ್ಕೆ ಕಳಸಾ ಬಂಡೂರಿ ಹೋರಾಟ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ ಎಂಬಾತರೇ ಮುಂದಾಗಿದ್ದು, ಇವರು ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಇವಿಎಂಗಳಲ್ಲಿ ನೋಟಾ ಬದಲು ಬಾರಕೋಲು ಚಿಹ್ನೆ ಬಳಸುವಂತೆ ನರಗುಂದ ತಹಸೀಲ್ದಾರ್ ಮೂಲಕ ಕೇಂದ್ರ ಚುನಾವಣಾ ಆಯೋಗಕ್ಕೆ 2 ಬಾರಕೋಲು ಸಮೇತ ಮನವಿ ಸಲ್ಲಿಸಿದ್ದಾರೆ.
ಆದರೆ ಇದೀಗ ತಿಂಗಳಾದರೂ ಆಯೋಗದಿಂದ ಉತ್ತರ ಬರದ ಕಾರಣ, ಮುಖ್ಯ ಚುನಾವಣಾ ಆಯುಕ್ತರು ಹಾಗೂ ಕಾರ್ಯದರ್ಶಿಗೆ ಲೀಗಲ್ ನೋಟಿಸ್ ಜಾರಿ ಮಾಡಿದ್ದಾರೆ.
ಅಷ್ಟೇ ಅಲ್ಲದೇ ನೋಟಾ ಅನುಷ್ಠಾನದಲ್ಲಿನ ನ್ಯೂನತೆ ಸರಿಪಡಿಸಲು ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ವಿಜಯ ಕುಲಕರ್ಣಿ ತಮ್ಮ ಹೆಸರಿನಲ್ಲಿಯೇ ವಕೀಲರಾದ ಗುರುದತ್ತ ಅಂಕೋಲೆಕರ ಮೂಲಕ ನೋಟಿಸ್ ಕೊಡಿಸಿದ್ದಾರೆ.
ರೈತ ಹೋರಾಟಗಾರ ವಿಜಯ ಕುಲಕರ್ಣಿ ಹೇಳುವ ಪ್ರಕಾರ, ನೋಟಾ ಬಟನ್ ಗೆ ಚಿಹ್ನೆ ಬಳಸದೆ ಇಂಗ್ಲಿಷ್ ಅಕ್ಷರದಲ್ಲಿ ನೋಟಾ ಎಂದು ಬರೆಯಲಾಗಿದೆ. ಆದರೆ, ಚುನಾವಣೆ ಅಭ್ಯರ್ಥಿಗಳಿಗೆ ಚಿಹ್ನೆ ಇದ್ದಂತೆ ತಿರಸ್ಕರಿಸುವ ಚಿಹ್ನೆ ಇಲ್ಲ. ಅದು ಅನಕ್ಷರಸ್ಥ ಮತದಾರರಿಗೆ ಗೊತ್ತಾಗುವುದಿಲ್ಲ. ಇದರಿಂದ ನೋಟಾದ ಮೂಲ ಉದ್ದೇಶ ಈಡೇರುವುದಿಲ್ಲ. ಅದಕ್ಕಾಗಿ ನೋಟಾಕ್ಕೆ ಬಾರಕೋಲು ಚಿಹ್ನೆ ಅಳವಡಿಸಿ ನೋಟಾ ಮಹತ್ವ ಎತ್ತಿ ಹಿಡಿಯಬೇಕು ಎನ್ನುವುದು ವಿಜಯ ಕುಲಕರ್ಣಿ ಅವರ ವಾದವಾಗಿದೆ.
ಈ ಹಿಂದೆ 2013 ರಲ್ಲಿ ಚುನಾವಣಾ ಅಭ್ಯರ್ಥಿಗಳಲ್ಲಿ ಯಾರೊಬ್ಬರಿಗೂ ಮತ ಹಾಕಲು ಇಷ್ಟ ಇಲ್ಲದೆ ಇದ್ದಾಗ ಪ್ರತ್ಯೇಕ ವ್ಯವಸ್ಥೆ ಮಾಡಲು ಪೀಪಲ್ಸ್ ಯುನಿಯನ್ ಸಿವಿಲ್ ಲಿಬರಟೀಸ್ (ಪಿಯುಸಿಎಲ್) ಎನ್ನುವ ಸಂಸ್ಥೆ ಸುಪ್ರೀಂಕೋರ್ಟ್‌ಗೆ ಮೊರೆ ಹೋಗಿತ್ತು. ಸಂಸ್ಥೆ ವಾದ ಆಲಿಸಿದ ಸುಪ್ರೀಂ ಕೋರ್ಟ್, 2013ರಲ್ಲಿ ಮತಯಂತ್ರಗಳಲ್ಲಿ ನೋಟಾ- ಮೇಲಿನವರು ಯಾರೂ ಅಲ್ಲ ಎಂಬ ಹೆಚ್ಚುವರಿ ಬಟನ್ ಅಳವಡಿಸುವಂತೆ ಆದೇಶಿಸಿತ್ತು. ಇದೀಗ ರೈತ ಹೋರಾಟಗಾರರು ಈ ಚಿಹ್ನೆಯನ್ನು ಬದಲಾಯಿಸಲು ಕಾನೂನು ಹೋರಾಟ ನಡೆಸಿದ್ದಾರೆ.