Top Newsಅಪರಾಧಜಿಲ್ಲೆರಾಜ್ಯ
Trending

ಧಾರವಾಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬದಲಾವಣೆಗೆ ದಿಂಗಾಲೇಶ್ವರ ಶ್ರೀಗಳಿಂದ ಡೆಡ್ ಲೈನ್…!

ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಲಿಂಗಾಯತ ಮತ್ತು ಉಳಿದ ಸಮಾಜವನ್ನು ತುಳಿಯುತ್ತಿದ್ದಾರೆ. ಸ್ವಾಮೀಜಿಗಳನ್ನು ಅಪಮಾನಗೊಳಿಸಿದ್ದಾರೆ. ಧಾರವಾಡ ಲೋಕಸಭಾ ಮತಕ್ಷೇತ್ರದಿಂದ ಅವರಿಗೆ ನೀಡಿರುವ ಟಿಕೆಟ್’ನ್ನು ಬಿಜೆಪಿ ವರಿಷ್ಠರು ಮಾ. 31 ರೊಳಗೆ ಬದಲಾವಣೆ ಮಾಡಬೇಕೆಂದು ಶಿರಹಟ್ಟಿಮಠದ ಪಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ಆಗ್ರಹಿಸಿದರು.

ಮೂರುಸಾವಿರಮಠದ ಆವರಣದಲ್ಲಿ ವಿವಿಧ ಸ್ವಾಮೀಜಿಗಳೊಂದಿಗೆ ಚಿಂತನ ಮಂಥನ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಕೆಟ್ ಬದಲಾವಣೆ ಆಗದಿದ್ದರೇ ಎಪ್ರಿಲ್ 2 ರಂದು ಮತ್ತೊಮ್ಮೆ ಸಭೆ ನಡೆಸಿ ನಿರ್ಧಾರ ಪ್ರಕಟಿಸಲಾಗುವುದು ಎಂದರು‌.

ಪ್ರಲ್ಹಾದ್ ಜೋಶಿ ಅವರಿಗೆ ಅಧಿಕಾರ ಮತ್ತು ಸಂಪತ್ತಿನ ಮದವೇರಿದ್ದು, ಲಿಂಗಾಯತ, ಕುರುಬ ಸೇರಿದಂತೆ ಎಲ್ಲ ಸಮೂದಾಯವನ್ನು ತುಳಿದಿದ್ದಾರೆ. ಸ್ವಾಮೀಜಿಗಳನ್ನು ಅವಮಾನಿಸಿದ್ದಾರೆ. ನಮ್ಮ ವಿರೋಧ ಅವರ ವ್ಯಕ್ತಿತ್ವಕ್ಕೆ ಹೊರತು ಪಕ್ಷ ಅಥವಾ ಸಮಾಜಕ್ಕೆ ಅಲ್ಲ ಎಂದು ಹೇಳಿದರು.

ಇಂದು ನಡೆದ ಮಠಾಧಿಪತಿಗಳ ಚಿಂತನ ಮಂಥನ ಸಭೆಯಲ್ಲಿ ಚರ್ಚೆಯಾದ ಪ್ರಮುಖ ವಿಷಯಗಳು

ಇಂದು ನಡೆದ ಸಭೆಯಲ್ಲಿ ಮಠಾಧಿಪತಿಗಳು ಕೆಲವು ನಿರ್ಧಾರ ಕೈಗೊಂಡಿದ್ದು, ಅದರಲ್ಲಿ ಮುಖ್ಯವಾಗಿ ರಾಜಕಾರಣಿಗಳು ತಿಳಿದು ರಾಜಕಾರಣ ಮಾಡಬೇಕು ಹೊರತು ಇತರರನ್ನು ತುಳಿದು ರಾಜಕಾರಣ ಮಾಡಬಾರದು, ಧಾರವಾಡ ಮತಕ್ಷೇತ್ರಕ್ಕೆ ಕೇಂದ್ರ ಸಚಿವರಿಗೆ ಟಿಕೆಟ್ ಘೋಷಣೆ ಆಗಿದೆ. ಅದನ್ನು ಬದಲಾವಣೆ ಮಾಡಬೇಕು, ಬೇರೆ ಕ್ಷೇತ್ರ ಇಲ್ಲವೇ ಅವರನ್ನು ಪಕ್ಷದ ಕೆಲಸಕ್ಕೆ ಬಳಸಬೇಕು.‌ ಇಲ್ಲಿಯ ಮಾಜಿ ಸಿಎಂ ಬೇರೆ ಕ್ಷೇತ್ರ ಕೊಟ್ಟಂತೆ ಮತ್ತು ನಾಲ್ಕು ಸಾರಿ ಲಿಂಗಾಯತರು ಇವರ ಬೆನ್ನಿಗೆ ನಿಂತು ಗೆಲ್ಲಿಸಿ ಕೇಂದ್ರ ಸಚಿವರನ್ನಾಗಿ ಮಾಡಿದ್ದಾರೆ. ಆ ಉಪಕಾರಕ್ಕೆ ಜೋಶಿ ಕ್ಷೇತ್ರ ತ್ಯಾಗ ಮಾಡಲಿ. ಹಾಗೂ ಲಿಂಗಾಯತ ಕ್ಷೇತ್ರದಲ್ಲಿ ಬ್ರಾಹ್ಮಣರು ಅನಿವಾರ್ಯವೇ? ಆದರೆ ಬ್ರಾಹ್ಮಣರ ಪ್ರಾಬಲ್ಯ ಇರುವ ಕ್ಷೇತ್ರದಲ್ಲಿ ಲಿಂಗಾಯತರನ್ನು ನಿಲ್ಲಿಸಿ ಆರಿಸಿ ತರಬೇಕು.

ಚಿಂತನ ಮಂಥನ ಸಭೆಯಲ್ಲಿ ಮಠಾಧಿಪತಿಗಳ ಅಭಿಪ್ರಾಯಗಳು

ಪ್ರಲ್ಹಾದ್ ಜೋಶಿ ಬದಲಾವಣೆಗೆ ಮುಖ್ಯ ಕಾರಣ ಎಂದರೇ, ಬಹುಸಂಖ್ಯಾತ ಲಿಂಗಾಯತ ಹಾಗೂ ಇತರ ಸಮಾಜದ ನಾಯಕರನ್ನು, ನೌಕರ, ವ್ಯಾಪಾರಿಗಳು ಸೇರಿದಂತೆ ಹಲವರು ಸಚಿವರಿಂದ ತುಳಿತಕ್ಕೆ ಒಳಗಾಗಿದ್ದಾರೆ. ಇವರ ಸೇಡಿನ ರಾಜಕಾರಣದಿಂದ ಅನೇಕ ನಾಯಕರು ಜಾತ್ಯಾತೀತವಾಗಿ ತುಳಿತಕ್ಕೆ ಒಳಗಾಗಿ, ಮಾನಸಿಕ, ದೈಹಿಕ, ಆರ್ಥಿಕ, ರಾಜಕೀಯವಾಗಿ ಕುಸಿದು ಬಿದ್ದಿದ್ದಾರೆ. ಹಾಗೂ ಮಹಿಳಾ ಪ್ರತಿನಿಧಿಗಳಿಗೂ ಇವರು ಅವಮಾನ ಮಾಡಿದ್ದಾರೆ. ಐಟಿ, ಇಡಿ ಇತರ ದಾಳಿಯ ದಾಳ ಮತ್ತು ಭಯ ಉಂಟು ಮಾಡಿ ಬಾಯಿ ಬಿಟ್ಟು ಮಾತನಾಡದ ಹಾಗೇ ಸ್ವತಂತ್ರ ಹೀನರ ದಾಸ್ಯತ್ವದಲ್ಲಿ ಬದುಕಿದ್ದಾರೆ. ಸರ್ಕಾರಿ, ಅರೆಸರ್ಕಾರಿ ಕಚೇರಿಗಳಲ್ಲಿ, ಸಂಘ ಸಂಸ್ಥೆಗಳಲ್ಲಿ ಪ್ರಲ್ಹಾದ್ ಜೋಶಿ ತಮ್ಮ ಹಿಂಭಾಲಕರನ್ನು ಸೇರಿಸಿ ಪ್ರಮಾಣಿಕರನ್ನು ನಾಶ ಮಾಡಿದ್ದಾರೆ.

ಮಾಜಿ ಸಿಎಂ ಮರಳಿ ಪಕ್ಷಕ್ಕೆ ಹೋದಾಗ ಶುಭಾಶಯಗಳನ್ನು ಹೇಳಲು ಮನಸ್ಸಿದ್ದರೂ ಹಿಂಬಾಲಕರು ಇವರ ಭಯಕ್ಕೆ ಯಾರು ಅವರ ಮನೆಗೆ ಹೋಗದ ಹಾಗೇ ವಾತಾವರಣ ಸೃಷ್ಟಿ ಮಾಡಿದ್ದರು.

ನಾವು ಈ ಹಿಂದೆ ಕೆಲಸದ ನಿಮಿತ್ತ ಕರೆ ಮಾಡಿದಾಗ ನಿಮ್ಮ ಸಮಾಜದ ನಾಯಕರು ಇಲ್ಲವೇ ಎಂದು ಹೇಳಿ ಅವಮಾನಿಸಿದರು. ಈ ಹಿನ್ನೆಲೆಯಲ್ಲಿ ಅವರಿಂದ ದೂರ ಉಳಿದು ಮೂರು ವರ್ಷ ಆಯಿತು. ನಮ್ಮ ಭೇಟಿಗೆ ಅವರಿಗೆ ಅವಕಾಶ ನೀಡಿಲ್ಲ. ಸಭೆಗಳಲ್ಲಿ ಮಾತನಾಡಿಸಿಲ್ಲ, ಸ್ವಾಮೀಜಿ ವಿರೋಧ ಬೇಡ ಎಂದು ಅವರ ಸಹೋದರನಿಗೆ ಸಲಹೆ ಕೊಟ್ಟರೇ ಅಂತಹ ಸ್ವಾಮೀಜಿಗಳು ನಮ್ಮ‌ ಮನೆಯ ಮುಂದೆ ಪ್ರತಿದಿನವೂ ನೂರಾರು ಜನರು ತಿರುಗಾಡುತ್ತಾರೆ ಎಂದು ಹೇಳುವ ಮೂಲಕ ಸಮಾಜದ ಶ್ರೀಗಳನ್ನು ಅವಮಾನ ಮಾಡಿದ್ದಾರೆ.

ಕಲಘಟಗಿಯಲ್ಲಿ ಪಕ್ಷದ ಪ್ರಚಾರದ ಕಾರ್ಯಾಲಯ ಉದ್ಘಾಟನೆಗೆ ಸುಳ್ಳು ಹೇಳಿ ನಮ್ಮ ಸ್ವಾಮೀಜಿಗಳನ್ನು ಕರೆದು ತೇಜೋವಧೆ ಮಾಡಿ, ದುರುಪಯೋಗ ಪಡಿಸಿಕೊಂಡಿದ್ದಾರೆ. ತಮ್ಮ ಸಮಾಜದ ಸ್ವಾಮಿಗಳ ಹತ್ತಿರ ಹೊದಾಗ ನೆಲದ ಮೇಲೆ ಕೂಡುವ ಇವರು, ನಮ್ಮ ಜಗದ್ಗುರುಗಳ ಹತ್ತಿರ ಮತ್ತು ಮಠಾಧಿಪತಿಗಳ ಮಧ್ಯೆ ಕುಳಿತು ಲಿಂಗಾಯತ ಸ್ವಾಮೀಜಿಗಳು ಅನ್ಯ ಪಕ್ಷದ ಮತ್ತು ಅಪಪ್ರಚಾರಕ್ಕೆ ಕಾರಣರಾಗಿದ್ದಾರೆ.

ಇದರೊಂದಿಗೆ ಹಲವು ಶ್ರೀಗಳು ಜೋಶಿಯವರ ಪುತ್ರಿ ವಿವಾಹ ಕಾರ್ಯಕ್ರಮಕ್ಕೆ ಕರೆದು ಕನಿಷ್ಠ ರೀತಿಯಲ್ಲಿ ನಡೆದು, ಭೀಕ್ಷುಕರ ಹಾಗೇ ನಡೆಸಿಕೊಂಡಿದ್ದಾರೆ ಎಂದು ಹರಿಹಾಯ್ದ ಶ್ರೀಗಳು ನಾವು ಪಕ್ಷ ವಿರೋಧಿಗಳಲ್ಲ, ವ್ಯಕ್ತಿಯ ವ್ಯಕ್ತಿತ್ವದ ವಿರೋಧಿಗಳು, ಅದಕ್ಕೆ ಕಾರಣ ಅವರ ನಡೆ, ನುಡಿಗಳು. ವ್ಯಕ್ತಿ ಪ್ರಜ್ಞೆಗಿಂತ ಸಮಷ್ಟಿ ಪ್ರಜ್ಞೆ ನಮ್ಮದಾಗಿದೆ ಎಂದು ಚಿಂತನ ಮಂಥನ ಸಭೆಯ ಚರ್ಚೆಗಳನ್ನು ದಿಂಗಾಲೇಶ್ವರ ಶ್ರೀಗಳು ಪತ್ರಿಕಾಗೋಷ್ಠಿಯಲ್ಲಿ ಹೀಗೆ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮೂರುಸಾವಿರಮಠದ ಡಾ.ಗುರುಸಿದ್ದರಾಜಯೋಗಿಂದ್ರ ಶ್ರೀಗಳು, ಮುರುಘಾಮಠದ ಮಲ್ಲಿಕಾರ್ಜುನ ಶ್ರೀಗಳು ಸೇರಿದಂತೆ 40 ಕ್ಕೂ ಅಧಿಕ ಮಠಾಧಿಪತಿಗಳು ಉಪಸ್ಥಿತರಿದ್ದರು.

ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
0
+1
2
+1
0
+1
0
+1
0
+1
0
+1
1

Related Articles

Leave a Reply

Your email address will not be published. Required fields are marked *

Back to top button