ಹುಬ್ಬಳ್ಳಿ: ನಾನು ಬೆಳಗಾವಿ ಲೋಕಸಭಾ ಮತಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ. ಈ ಬಾರಿ ಬೆಳಗಾವಿಯಿಂದ ನೂರಕ್ಕೆ ನೂರು ಗೆಲುತ್ತೇನೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.
ಲೋಕಸಭಾ ಟಿಕೆಟ್ ವಿಚಾರವಾಗಿ ಬೆಂಗಳೂರಿಗೆ ತೆರಳಿ ವರಿಷ್ಠರು ಹಾಗೂ ರಾಜ್ಯ ನಾಯಕರ ಜೊತೆಗೆ ಚರ್ಚಿಸಿ ವಾಪಾಸ್ ಹುಬ್ಬಳ್ಳಿಗೆ ಆಗಮಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಸ್ಪರ್ಧೆ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಚರ್ಚೆ ಮಾಡಿದ್ದೇನೆ. ಅವರು ಸ್ಪರ್ಧೆ ಮಾಡುವಂತೆ ಹೇಳಿದ್ದಾರೆ. ಸ್ಪರ್ಧೆಗೆ ಒಪ್ಪಿಗೆ ಸೂಚಿಸಿದ್ದೇನೆ ಎಂದರು.
ನಾನು ಈಗಾಗಲೇ ಬೆಳಗಾವಿಯ ನಾಯಕರ ಜೊತೆಗೆ ಮಾತನಾಡಿದ್ದೇನೆ. ಅಧಿಕೃತ ಅಭ್ಯರ್ಥಿ ಆದ ಬಳಿಕ ಚುನಾವಣೆಗೆ ತಯಾರಿ ಮಾಡುತ್ತೇನೆ. ಮಂಗಳಾ ಅಂಗಡಿ ಅವರಿಗೂ ಈ ಬಗ್ಗೆ ಮಾತನಾಡಿದ್ದೇನೆ. ನಾವೆಲ್ಲ ಒಂದೇ, ಒಂದೇ ಕುಟಂಬ ಎಂದಿದ್ದಾರೆ ಎಂದರು.
ಟಿಕೆಟ್ ಕೈತಪ್ಪಿರುವ ವಿಚಾರವಾಗಿ ಮಾತನಾಡುವುದಿಲ್ಲ, ಸದ್ಯ ಖುಷಿಯಾಗಿದ್ದೇನೆ. ಈಶ್ವರಪ್ಪ ಅಸಮಾಧಾನ ವಿಚಾರವನ್ನು ವರಿಷ್ಠರು ಸಮಾಧಾನ ಮಾಡತ್ತಾರೆ. ಈ ಬಾರಿ ಬೆಳಗಾವಿಯಲ್ಲಿ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಯಡಿಯೂರಪ್ಪ ಅವರ ಮೇಲೆ ದಾಖಲಾಗಿರುವ ಪೋಕ್ಸೋ ಕೇಸ್ ವಿಚಾರವಾಗಿ ಮಾತನಾಡಿ, ಯಡಿಯೂರಪ್ಪ ಅವರ ಮೇಲೆ ಸುಳ್ಳು ಕೇಸ್ ದಾಖಲಾಗಿದೆ. ಅದು ಫಾಲ್ಸ್ ಕೇಸ್ ಆಗಿದ್ದು, ಪ್ರಕರಣದಿಂದ ಯಡಿಯೂರಪ್ಪ ಹೊರಗಡೆ ಬರುತ್ತಾರೆ. ಚುನಾವಣೆ ಹಿನ್ನೆಲೆಯಲ್ಲಿ ಅವರ ಮೇಲೆ ಸುಳ್ಳು ದಾಖಲಾಗಿದೆ ಎಂದು ಹೇಳಿದರು.