ಹುಬ್ಬಳ್ಳಿ: ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಸಾರ್ವಜನಿಕರ ಹಾಗೂ ಪ್ರಯಾಣಿಕರ ಹಿತದೃಷ್ಟಿಯಿಂದ ಹುಬ್ಬಳ್ಳಿಯ ವಿದ್ಯಾನಗರದ ಟೆಂಡರ್ ಶ್ಯೂರ್ ರಸ್ತೆಯಲ್ಲಿ ಶಿರೂರು ಪಾರ್ಕ್ ಬಳಿಯಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬಸ್ ನಿಲ್ದಾಣ ಮಾಡಲಾಗಿತ್ತು. ಆದರೇ ಇದೀಗ ಆ ಬಸ್ ನಿಲ್ದಾಣ ಕಳ್ಳತನವಾಗಿ ತಿಂಗಳುಗಳು ಕಳೆದರೂ ಪಾಲಿಕೆ ಅಧಿಕಾರಿಗಳು ಪತ್ತೆ ಹಚ್ಚುವಲ್ಲಿ ವಿಫಲವಾಗಿದ್ದಾರೆ.
ಮೊದಲೇ ಇಲ್ಲಿನ ಟೆಂಡರ್ ಶ್ಯೂರ್ ರಸ್ತೆ ಅತಿಹೆಚ್ಚು ಜನದಟ್ಟಣೆಯ ಬಡಾವಣೆಯಾಗಿದ್ದು, ಪ್ರತಿನಿತ್ಯ ಸಾವಿರಾರು ಜನರು ಕೆಲಸದ ನಿಮಿತ್ತ ಓಡಾಟ ನಡೆಸುತ್ತಾರೆ. ಹೀಗಾಗಿಯೇ ಜನರ ಅನುಕೂಲಕ್ಕೆ ಟೆಂಡರ್ ಶ್ಯೂರ್ ರಸ್ತೆಯಲ್ಲಿ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗಿತ್ತು. ಆದರೆ ಏಕಾಏಕಿ ಈ ಬಸ್ ನಿಲ್ದಾಣ ತೆರವುಗೊಳಿಸಲಾಗಿದ್ದು, ಜನರು ಬಸ್ ನಿಲ್ದಾಣವಿಲ್ಲದೇ ಬಿಸಿಲಿನಲ್ಲಿ ಬಸ್ಸಿಗಾಗಿ ಕಾಯೋ ಪರಿಸ್ಥಿತಿ ನಿರ್ಮಾಣ ಆಗಿದೆ. ಬಸ್ ನಿಲ್ದಾಣ ಕಣ್ಮರೆಯಾಗಿರುವ ಕುರಿತು ನಿಮ್ಮ ದಿನವಾಣಿ ಜ.8 ರಂದು ಹುಬ್ಬಳ್ಳಿಯಲ್ಲಿ Busstand ಬಿಡದ ಖದೀಮರು, ಕಣ್ಮುಚ್ಚಿ ಕುಳಿತ ಪಾಲಿಕೆ ಎಂಬ ಶೀರ್ಷಿಕೆ ಅಡಿಯಲ್ಲಿ ಸುದ್ದಿಯನ್ನು ಪ್ರಕಟಿಸಿ, ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರುವ ಕೆಲಸ ಮಾಡಿತ್ತು.
ಬಸ್ ನಿಲ್ದಾಣವಿಲ್ಲದೇ ಪಾದಚಾರಿ ರಸ್ತೆಯಲ್ಲಿ ಕುಳಿತಿರುವ ಮಹಿಳೆ ಚಿತ್ರ
ಆಗ ಅಧಿಕಾರಿಗಳು ಬಸ್ ನಿಲ್ದಾಣದ ತೆರವಿನ ಬಗ್ಗೆ ಮಾಹಿತಿಯನ್ನು ಪಡೆದು ತಪ್ಪಿತಸ್ಥರ ವಿರುದ್ಧ ಕ್ರಮದ ಜತೆಗೆ ಮತ್ತೆ ಬಸ್ಟ್ಯಾಂಡ್ ನಿರ್ಮಾಣದ ಭರವಸೆ ನೀಡಿದರು.
ಇದೀಗ ಘಟನೆ ನಡೆದು ತಿಂಗಳು ಕಳೆದರೂ ಸಹ ಅಧಿಕಾರಿಗಳು ತಮ್ಮ ಜವಾಬ್ದಾರಿ ಮರೆತವರಂತೆ ವರ್ತಿಸುತ್ತಿದ್ದಾರೆ.
ಈ ನಡುವೆ ಬಸ್ ನಿಲ್ದಾಣ ನಿರ್ಮಾಣ ಮಾಡುವಲ್ಲಿ ಪಕ್ಕದ ಕಮರ್ಷಿಯಲ್ ಬಿಲ್ಡಿಂಗ್ ಮಾಲೀಕರ ಒತ್ತಡಕ್ಕೆ ಮಣಿದ್ರಾ? ಅಥವಾ ಬೇರೆ ಕೈಗಳ ಕಾಟಕ್ಕೆ ತಟಸ್ಥರಾಗಿದ್ದಾರಾ? ಎಂಬ ಅನುಮಾನವನ್ನು ಸಾರ್ವಜನಿಕರು ಮಾಡುವಂತಾಗಿದೆ.
ಈಗಲಾದರೂ ದಕ್ಷ ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ, ಸ್ಮಾರ್ಟ್ ಸಿಟಿ ಎಂಡಿ ಹಾಗೂ ಆ ಭಾಗದ ಜನಪ್ರತಿನಿಧಿಗಳು ಗಮನ ಹರಿಸಿ ಮಾಯವಾದ ಬಸ್ ನಿಲ್ದಾಣ ಹುಡುಕಿ ಜನರಿಗೆ ಅನುಕೂಲ ಮಾಡುತ್ತಾರಾ? ಅಥವಾ ಕಾಲಹರಣ ಮಾಡಿ ಜನರ ಕೆಂಗಣ್ಣಿಗೆ ಗುರಿಯಾಗುತ್ತಾರಾ? ಎಂಬುದು ಕಾದು ನೋಡಬೇಕಿದೆ.
ಇನ್ನೂ ಜನರಿಗೆ ಅನುಕೂಲವಾಗಿದ್ದ ಬಸ್ ನಿಲ್ದಾಣ ಪುನಃ ಅದೇ ಸ್ಥಳದಲ್ಲಿ ನಿರ್ಮಾಣ ಆಗುವವರೆಗೂ ನಮ್ಮ ಸುದ್ದಿ ನಿರಂತರ…