ಹುಬ್ಬಳ್ಳಿ: ಹೊಸಮುಖ, ಯುವಕರು, ಪಕ್ಷ ನಿಷ್ಠೆ, ವಾಕ್ ಚಾತುರ್ಯ ಇವೆಲ್ಲ ಗಮನದಲ್ಲಿ ಇಟ್ಟುಕೊಂಡು ಮುಂದಿನ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದ್ದು, ಈ ಹೇಳಿಕೆ ಇದೀಗ ಧಾರವಾಡ ಜಿಲ್ಲೆಯ ರಾಜಕಾರಣದಲ್ಲಿ ಬಾರಿ ಸದ್ದು ಮಾಡುತ್ತಿದೆ. ಈ ಮಾತನ್ನು ವಿದ್ಯಾನಗರ ಬ್ಲಾಕ್ ಕಾಂಗ್ರೆಸ್‌ನ ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ ಅವರ ಕುರಿತಾಗಿಯೇ ಹೇಳಿರುವ ಹೇಳಿಕೆ ಎಂದೇ ಪರಿಗಣಿಸಲಾಗುತ್ತಿದೆ.
ಡಿಸಿಎಂ ಡಿ.ಕೆ. ಶಿವಕುಮಾರ ಹುಬ್ಬಳ್ಳಿಯಲ್ಲಿ ಇತ್ತಿಚೆಗೆ ಗದಗ ಜಿಲ್ಲೆಯ ಪ್ರವಾಸ ಕೈಗೊಂಡ ಹಿನ್ನೆಲೆಯಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ನೀಡಿದ ಹೇಳಿಕೆ ಇದಾಗಿದ್ದು, ನಗರದ ಕಾಂಗ್ರೆಸ್ ನಾಯಕರಲ್ಲಿ ಸಂಚಲನ ಮೂಡಿಸಿದೆ.
ರಜತ್ ಉಳ್ಳಾಗಡ್ಡಿಮಠ ಧಾರವಾಡ ಲೋಕಸಭಾ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಡಿಕೆಶಿ ಹೇಳಿಕೆಯು ರಜತ್ ಅವರ ಆಕಾಂಕ್ಷೆಗೆ ಇನ್ನಷ್ಟು ಬಲ ತುಂಬಿದಂತಾಗಿದೆ.
ಇನ್ನು ಈ ಹಿಂದೆ ಹು-ಧಾ ಸೆಂಟ್ರಲ್ ವಿಧಾನಸಭೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಅವರು ಪಕ್ಷದ ವರಿಷ್ಠರ ಮಾತಿಗೆ ಬೆಲೆ ಕೊಟ್ಟು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಿಗೆ ಟಿಕೆಟ್ ಬಿಟ್ಟು ಕೊಟ್ಟಿದ್ದರು. ಅಂದಿನಿಂದ ಅವರು ಲೋಕಸಭೆ ಚುನಾವಣೆ ತಯಾರಿ ನಡೆಸಿದ್ದಾರೆ.
ಈ ನಡುವೆ ಡಿಕೆ ಶಿವಕುಮಾರ್ ಅವರ ಹೇಳಿಕೆಯಿಂದ ರಜತ್ ಉಳ್ಳಾಗಡ್ಡಿಮಠ ಅವರಲ್ಲಿ ಇನ್ನಷ್ಟು ಹುಮ್ಮಸು ಮೂಡಿಸಿದ್ದು, ಪಕ್ಷ ಸಂಘಟನೆಯಲ್ಲಿ ಇನ್ನಷ್ಟು ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಮಾಡಿದೆ ಎಂದು ಆಪ್ತ ಮೂಲಗಳು ತಿಳಿಸಿವೆ.