ಕುಂದಗೋಳ: ಬಿಜೆಪಿ ಪಕ್ಷ ತೊರೆದು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ಮಾಜಿ ಶಾಸಕ ಎಸ್.ಐ.ಚಿಕ್ಕನಗೌಡ್ರ ಅವರು ಕೊನೆಯ ಕ್ಷಣದಲ್ಲಿ ತಮ್ಮ ನಾಮಪತ್ರವನ್ನು ಹಿಂಪಡೆಯುತ್ತಾರೆಂಬ ಊಹಾಪೋಹಗಳು ಕುಂದಗೋಳ ಕ್ಷೇತ್ರದಲ್ಲಿ ಸದ್ದು ಮಾಡಿದ್ದವು. ಇದಕ್ಕೆಲ್ಲ ಸ್ಪಷನೆ ನೀಡುವ ಉದ್ದೇಶದಿಂದ ಮಾಜಿ ಶಾಸಕ ಎಸ್.ಐ.ಚಿಕ್ಕನಗೌಡ್ರ ಇಂದು ಪತ್ರಿಕಾಗೋಷ್ಠಿ ಏರ್ಪಡಿಸಿ, ಚುನಾವಣೆ ಕಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಕ್ಷೇತ್ರದ ಜನರ ಬೆಂಬಲದಿಂದ ಈ ಬಾರಿ ಕನಿಷ್ಠ 25 ಸಾವಿರಕ್ಕೂ ಅಧಿಕ ಅಂತರದಿಂದ ಗೆದ್ದು ಬರಲಿದ್ದೇನೆ ಎಂದು ಮಾಜಿ ಶಾಸಕ ಎಸ್.ಐ.ಚಿಕ್ಕನಗೌಡ್ರ ವಿಶ್ವಾಸ ವ್ಯಕ್ತಪಡಿಸಿದರು.
ಕುಂದಗೋಳ ಪಟ್ಟಣದಲ್ಲಿ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ಈಗಾಗಲೇ ಶಾಸಕನಾಗಿ ಅಧಿಕಾರದ ರುಚಿ ಉಂಡಿರುವ ನಾನು. ಚುನಾವಣೆಗೆ ಸ್ಪರ್ಧೆ ಮಾಡುವ ಉದ್ದೇಶ ಹೊಂದಿರಲಿಲ್ಲ. ಆದರೆ ಕ್ಷೇತ್ರದ ಜನರ ಒತ್ತಾಯ, ಅಭಿಮಾನಿಗಳು, ಕಾರ್ಯಕರ್ತರ ಪ್ರೇರಣೆಯಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದೇನೆ ಎಂದರು.
ಈಗಾಗಲೇ ಕುಂದಗೋಳ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಶಾಸಕನಿದ್ದ ಸಮಯದಲ್ಲಿ ಮಾಡಿದ್ದು, ಅವುಗಳನ್ನು ಮುಂದಿಟ್ಟುಕೊಂಡು ಜನರ ಬಳಿ ಮತಯಾಚನೆ ಮಾಡಲಿದ್ದೇನೆ. ಈ ಬಾರಿ ಯಾವುದೇ ಪಕ್ಷದ ಚಿಹ್ನೆ ಇಟ್ಟುಕೊಂಡು ಅಬ್ಬರದ ಪ್ರಚಾರಕ್ಕೆ ಬೀಳದೇ ಪಕ್ಷೇತರನಾಗಿ ನನ್ನ ಚಿಹ್ನೆ ಕುಕ್ಕರ್ ಹಿಡಿದು ಕ್ಷೇತ್ರದ ಪ್ರತಿ ಗ್ರಾಮಗಳನ್ನು ಸಂಪರ್ಕ ಮಾಡಿ, ಜನರ ಮತ ಕೇಳುತ್ತೇನೆ ಎಂದು ಹೇಳಿದರು.
ಈಗಾಗಲೇ ಸಾಕಷ್ಟು ಜನರು ನಾವು ಯಾರ ಬೆಂಬಲಕ್ಕೆ ಹೋಗುವುದಿಲ್ಲ. ನಮಗೆ ವ್ಯಕ್ತಿ ಮುಖ್ಯ, ಅಭಿವೃದ್ಧಿ ಮುಖ್ಯ ಈ ನಿಟ್ಟಿನಲ್ಲಿ ಕ್ಷೇತ್ರ ಹಾಗೂ ಜನರ ಏಳಿಗೆ ದೃಷ್ಟಿಯಿಂದ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದರು ಬೆಂಬಲಿಸುವ ಭರವಸೆ ನೀಡಿದ್ದು, ಅದರಂತೆ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳಿಗಿಂತ ಹೆಚ್ಚಿನ ಮತಗಳನ್ನು ಪಡೆದು ಜಯಭೇರಿ ಬಾರಿಸಲಿದ್ದೇನೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಮಲ್ಲಿಕಾರ್ಜುನ ಕಿರೇಸೂರ, ಶೇಖಣ್ಣ ಕಂಬಳಿ, ಸಲೀಂ ಕಡ್ಲಿ, ಶಂಕರಗೌಡ ದೊಡ್ಡಮನಿ, ಮಾನಿಕಾ ಚಿಲ್ಲೂರು, ಸಿದ್ದಣ್ಣ ಹೋಳಿ, ಮಂಜುನಾಥ ದೊಡ್ಡಗೌಡ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.