ಹಾವೇರಿ: ಶಿಗ್ಗಾಂವಿ ತಾಲ್ಲೂಕಿನ ಹನುಮನಹಳ್ಳಿ ಸೇರಿ ಸುತ್ತಮುತ್ತಲ ಗ್ರಾಮಗಳ ರೈತರು ಸೀಗೆ ಹುಣ್ಣಿಮೆಯನ್ನು ಶ್ರದ್ಧಾಭಕ್ತಿಯಿಂದ ಶುಕ್ರವಾರ ಆಚರಿಸಿದರು.
ಪ್ರತಿ ವರ್ಷ ವಿಜಯದಶಮಿ ಬಳಿಕ ಬರುವ ಸೀಗೆ ಹುಣ್ಣಿಮೆಗೆ ಗ್ರಾಮೀಣ ಭಾಗದಲ್ಲಿ ವಿಶೇಷ ಮಹತ್ವ ನೀಡಲಾಗುತ್ತದೆ. ಅನ್ನದಾತರು ಸಂಭ್ರಮದಿಂದ ಭೂದೇವಿಯ ಆರಾಧನೆ ಮಾಡಿದರು.
ಇಲ್ಲಿನ ರೈತರು ಸೂರ್ಯೋದಯಕ್ಕೂ ಮುನ್ನವೇ ಜಾನುವಾರುಗಳ ಮೈ ತೊಳೆದು, ಸಿಂಗರಿಸಿ, ಚಕ್ಕಡಿ ಕಟ್ಟಿಕೊಂಡು ಕುಟುಂಬ ಸದಸ್ಯರು, ಸ್ನೇಹಿತರೊಂದಿಗೆ ತಮ್ಮ ಕೃಷಿ ಭೂಮಿಗೆ ತೆರಳಿ, ಭೂಮಾತೆಗೆ ಪೂಜೆ ಸಲ್ಲಿಸುತ್ತಾರೆ. ಅದರಂತೆ ಹನುಮನಹಳ್ಳಿಯ ರಮೇಶ ಸೋಮಕ್ಕವರ ಅವರ ಕುಟುಂಬವು ಭೂಮಿತಾಯಿ ಜತೆಗೆ ಪಂಚ ಪಾಂಡವರನ್ನು ಸ್ಥಾಪಿಸಿ, ಪೂಜೆ ಸಲ್ಲಿಸಿದರು.
ಅಲ್ಲದೇ ಸೀಗೆ ಹುಣ್ಣಿಮೆಯ ಸಡಗರಕ್ಕಾಗಿಯೇ ಹತ್ತಾರು ಆಹಾರ ಪದಾರ್ಥಗಳು ಸಿದ್ಧಗೊಂಡಿದ್ದವು. ಕಡುಬು, ಖರ್ಜಿಕಾಯಿ, ಹೋಳಿಗೆ, ಎಣಗಾಯಿ ಪಲ್ಯ, ಮಡಕಿಕಾಳು ಪಲ್ಯ… ಮುಂತಾದ ಸಿಹಿ ತಿನಿಸುಗಳನ್ನು ರಮೇಶ ಸೋಮಕ್ಕನವರ ಅವರ ಕುಟುಂಬ ಸದಸ್ಯರು ಹಾಗೂ ಸ್ನೇಹಿತರು ಜತೆಗೂಡಿ ಸಹಭೋಜನ ಮಾಡಿದರು.