ಆಟೋ ಚಾಲಕ ನಾಗರಾಜ್ ಗಬ್ಬೂರ ಅವರ ಸಾಮಾಜಿಕ ಕಾರ್ಯಕ್ಕೆ ಸೆಲ್ಯೂಟ್….!
ಹುಬ್ಬಳ್ಳಿ : ಜನ ಸೇವೆಯೇ ಜನಾರ್ದನ ಸೇವೆ ಎಂಬ ಪರಿಕಲ್ಪನೆ ಹೊಂದಿ, ಸಮಾಜದಲ್ಲಿ ತಮ್ಮದೇ ಆದ ಅಳಿಲು ಸೇವೆ ಮಾಡುವ ಮೂಲಕ ನೆಮ್ಮದಿ ಜೀವನ ಹಾಗೂ ಸಮಾಜ ಸೇವೆಯಲ್ಲಿ ಖುಷಿ ಕಾಣುವ ಆಟೋ ಚಾಲಕರು ಸಿಗುವುದು ಹೇರಳ.
ಹೌದು… ಅಂತಹ ಆಟೋ ಚಾಲಕ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಿರಂತರ ಸಮಾಜಕ್ಕಾಗಿ ಅಳಿಲು ಸೇವೆ ಮಾಡುತ್ತಿರುವುದು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿಯ ವೀರಾಪೂರ ಓಣಿಯ ಗೊಲ್ಲರ ಕಾಲೋನಿ ನಿವಾಸಿ ನಾಗರಾಜ್ ಶಿವಪ್ಪ ಗಬ್ಬೂರ ಎಂಬಾತರೇ ಇಂತಹ ಕೆಲಸ ಮಾಡುತ್ತಿದ್ದು, ನಿರಂತರ ೧೩ ವರ್ಷಗಳಿಂದ ಹುಬ್ಬಳ್ಳಿಯಲ್ಲಿ ಆಟೋ ಚಾಲಕರಾಗಿ ಕಾರ್ಯನಿರ್ವಾಹಿಸುತ್ತಿದ್ದು, ತಮ್ಮ ಆಟೋವನ್ನು ತಮ್ಮ ದೇವಾಲಯ ಎಂದು ನಂಬಿದ್ದಾರೆ.
ಕೇವಲ 10 ನೇ ತರಗತಿ ವಿದ್ಯಾಭ್ಯಾಸ ಮಾಡಿರುವ ಇವರು, ಸಮಾಜದಲ್ಲಿ ಏನಾದರೂ ಕೊಡುಗೆ ನೀಡಬೇಕು ಅಥವಾ ಜನರಿಗೆ ಏನಾದರೂ ಸಹಾಯ ಮಾಡಬೇಕು ಎಂಬ ಸದುದ್ದೇಶದಿಂದ ತಮ್ಮ ಆಟೋ ದಲ್ಲಿ ಫಿಲ್ಟರ್ ನೀರಿನ ಟ್ಯಾಂಕ್ ಇಟ್ಟು ಪ್ರಯಾಣಿಕರ ದಾಹ ತೀರಿಸುತ್ತಿದ್ದಾರೆ. ಅಲ್ಲದೇ ಆಟೋದಲ್ಲಿ ಕನ್ನಡ ಪುಸ್ತಕಗಳನ್ನು ಇಟ್ಟು ಕನ್ನಡ ಗರಿಮೆಯನ್ನು ಹೆಚ್ಚಿಸಿದ್ದಾರೆ.
ಇನ್ನೂ ಮಳೆಗಾಲದ ಸಂದರ್ಭದಲ್ಲಿ ನಿರಾಶ್ರಿತರಿಗೆ ಮಳೆಯಿಂದ ಸಂರಕ್ಷಣೆ ಮಾಡಲು ಹಾಳೆಗಳನ್ನು ವಿತರಿಸಿದ್ದು, ಆಹಾರ ಒದಗಿಸಿದ್ದು, ಹೀಗೆ ತಾವು ದುಡಿದ ದುಡ್ಡಿನಲ್ಲಿ ಪ್ರತಿದಿನ ೨೦ರೂಪಾಯಿ ಸಂಗ್ರಹಿಸಿ ಸಮಾಜ ಸೇವೆ ಮಾಡುತ್ತಿದ್ದು ಶ್ಲಾಘನೀಯವಾಗಿದೆ. ನಾಗರಾಜ್ ಅವರ ಕನ್ನಡಭಿಮಾನ, ಸಮಾಜಸೇವೆ ಇನ್ನೊಬ್ಬರಿಗೆ ಆದರ್ಶವಾಗಲಿ ಎಂಬುದೇ ನಮ್ಮ ಆಶಯವಾಗಿದೆ.