ಕುಂದಗೋಳ: ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಶೇ.85 ಕ್ಕಿಂತ ಹೆಚ್ಚು ಅಂಕಗಳಿಸಿದ ತಾಲೂಕಿನ ಬಣಜಿಗ ಸಮಾಜದ ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದಿಂದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಸಂಘದ ಕರ್ನಾಟಕ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಅಂದಾನಪ್ಪ ಉಪ್ಪಿನ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ವರ್ಷ ಜುಲೈ 23 ರಂದು ಬೆಳಿಗ್ಗೆ 10 ಕ್ಕೆ ಸಂಶಿ ಗ್ರಾಮದ ಶ್ರೀ ಜಗದ್ಗುರು ಫಕೀರೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ. ಅಂದು ಕಾರ್ಯಕ್ರಮದ ಉದ್ಘಾಟನೆಯನ್ನು ಕೊಡ್ಲಿವಾಡದ ಶತಾಯುಷಿ ಶ್ರೀ ಚನ್ನವೀರಪ್ಪ ಅಂಗಡಿ ಮಾಡಲಿದ್ದು, ಅರಕಲಗೂಡಿನ ಶ್ರೀ ತೋಂಟದಾರ್ಯ ಸಂಸ್ಥಾನಮಠ ಬಸವಾಪಟ್ಟಣದ ಪೂಜ್ಯ ಶ್ರೀ ಸ್ವತಂತ್ರ ಬಸವಲಿಂಗ ಶಿವಯೋಗಿಗಳು, ಸಂಶಿಯ ವಿರಕ್ತಮಠದ ಪರಮಪೂಜ್ಯ ಶ್ರೀ ಚನ್ನಬಸವ ದೇವರು ದಿವ್ಯ ಸಾನಿಧ್ಯವನ್ನು ವಹಿಸಲಿದ್ದಾರೆ ಎಂದರು.
ಎ.ಬಿ.ಉಪ್ಪಿನ
ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಘಟಕದ ಅಧ್ಯಕ್ಷ ಫಕ್ಕಿರೇಶ ಕೋರಿ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ವಿಶೇಷ ಉಪನ್ಯಾಸಕರಾಗಿ ಬಣಜಿಗ ಬಂಧು ಮಾಸ ಪತ್ರಿಕೆಯ ಸಂಪಾದಕ ರುದ್ರಣ್ಣ ಹೊಸಕೇರಿ ಆಗಮಿಸಲಿದ್ದು, ಮುಖ್ಯ ಅತಿಥಿಗಳಾಗಿ ರೇಶ್ಮೆ ಮಂಡಳಿಯ ಮಾಜಿ ಅಧ್ಯಕ್ಷೆ ಸವಿತಾ ಅಮರಶೆಟ್ಟಿ ಭಾಗವಹಿಸಲಿದ್ದಾರೆ. ನಿವೃತ್ತ ಶಿಕ್ಷಕ ಗವಿಶಿದ್ದಪ್ಪ ಕೊಪ್ಪಳ ಮಕ್ಕಳನ್ನು ಉದ್ದೇಶಿಸಿ ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದರು.
ಈ ವರ್ಷ ಬೆಳಗಾವಿಯ ಕೆ.ಎಸ್.ಆರ್.ಟಿ.ಸಿ ವಿಭಾಗೀಯ ಅಧಿಕಾರಿ ಸೋಮಣ್ಣ ಅಂಗಡಿ, ಯರೇಬುದಿಹಾಳದ ನಿವೃತ್ತ ಶಿಕ್ಷಕ ಫಕ್ಕಿರಪ್ಪ ಬಿಂಕದಕಟ್ಟಿ, ಬು.ಕೊಪ್ಪದ ಡಾ.ಬಸವರಾಜ ಹಸಬಿ ವಿಶೇಷ ಸನ್ಮಾನಿತರಾಗಿದ್ದಾರೆ. ಈಗಾಗಲೇ 30 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು ಆಸಕ್ತರು ಜುಲೈ 20 ರೊಳಗೆ ಹೆಸರು ನೊಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ 7892461233 ಗೆ ಸಂಪರ್ಕಿಸಬಹುದು ಎಂದು ಎ.ಬಿ.ಉಪ್ಪಿನ ತಿಳಿಸಿದರು.
ಈ ಸಂದರ್ಭದಲ್ಲಿ ಫಕ್ಕಿರೇಶ ಕೋರಿ, ಬಸವನೇಪ್ಪ ಕಜ್ಜಿ, ಅಂದಾನಪ್ಪ ಉಳವಪ್ಪನವರ, ಈರಣ್ಣಾ ಅಂಗಡಿ, ಮಡಿವಾಳಪ್ಪ ಅಂಗಡಿ ಸೇರಿದಂತೆ ಮುಂತಾದವರು ಇದ್ದರು.