ಪಾಲಿಕೆಯಿಂದ ಕಳಪೆ ಕಾಮಗಾರಿ: ಚೆರಂಡಿ ಸರಿಪಡಿಸುವಂತೆ ವಿಜಯಸೇನೆ ಒತ್ತಾಯ
ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆ ವತಿಯಿಂದ ಅವಳಿನಗರದಲ್ಲಿ ಕೈಗೊಂಡ ಚೆರಂಡಿ ಕಾಮಗಾರಿ ಕಳಪೆಯಾಗಿದ್ದು, ಕೂಡಲೇ ಸರಿಪಡಿಸಬೇಕೆಂದು ಒತ್ತಾಯಿಸಿ ವಿಜಯ ಸೇನೆ ಧಾರವಾಡ ಜಿಲ್ಲಾ ಘಟಕ ನಗರದಲ್ಲಿ ಪ್ರತಿಭಟನೆ ನಡೆಸಿತು.
ಇಲ್ಲಿನ ತಹಶಿಲ್ದಾರರ ಕಚೇರಿ ಆವರಣದಲ್ಲಿ ಪಾಲಿಕೆ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ ವಿಜಯಸೇನೆಯ ಕಾರ್ಯಕರ್ತರು, ಹು-ಧಾ ಅವಳಿನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಆದರೆ ಪಾಲಿಕೆಯಿಂದ ನಿರ್ಮಿಸಿದ ಚೆರಂಡಿ ಕಳಪೆಯಾಗಿದ್ದು, ಪರಿಣಾಮ ಒಳಚೆರಂಡಿ ಒಡೆದು ಚೆರಂಡಿ ನೀರು ನೀರಿನ ಮೇಲೆ ಹರಿಯುವಂತಾಗಿದೆ. ಇದರಲ್ಲಿಯೇ ಸಾರ್ವಜನಿಕರು ಗಲೀಜು ತುಳಿದು ಓಡಾಡುವಂತಾಗಿದೆ ಎಂದು ಹರಿಹಾಯ್ದರು.
ಅಲ್ಲದೇ ಚೆರಂಡಿಯಲ್ಲಿ ದನಕರಗಳು ಬಿದ್ದಿರುವ ಘಟನೆ ಕೂಡಾ ನಡೆದಿದೆ. ಅದರಂತೆ ಈ ಹಿಂದೆ ವೀರಾಪೂರ ರಸ್ತೆಯಲ್ಲಿ ತೆರೆದ ಚರಂಡಿಯಲ್ಲಿ ಮಗುವೊಂದು ಬಿದ್ದು ಸಾವನ್ನಪ್ಪಿದನ್ನು ನಾವು ಮರೆಯುವಂತಿಲ್ಲ. ಕೂಡಲೇ ಪಾಲಿಕೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮುಂದೆ ಇನ್ನಷ್ಟು ಅನಾಹುತ ಸಂಭವಿಸುವ ಮುನ್ನ ಎಚ್ಚೆತ್ತು ಚೆರಂಡಿಗಳನ್ನು ಸರಿಪಡಿಸಬೇಕೆಂದು ತಹಶಿಲ್ದಾರರ ಮೂಲಕ ಪಾಲಿಕೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ವಿಜಯ ಸೇನೆಯ ಧಾರವಾಡ ಜಿಲ್ಲಾ ಅಧ್ಯಕ್ಷ ಅಜಯ ಹಿರೇಮಠ, ರಾಜು ನದಾಫ್ ಸೇರಿದಂತೆ ಮುಂತಾದವರು ಇದ್ದರು.