ಕೊಟಗೊಂಡಹುಣಸಿ: ವಿಜೃಂಭಣೆಯ ಶ್ರೀ ಗುರು ರುದ್ರಮುನಿ ಶಿವಾಚಾರ್ಯ ರಥೋತ್ಸವ
ಹುಬ್ಬಳ್ಳಿ: ತಾಲೂಕಿನ ಕೊಟಗೊಂಡಹುಣಸಿ ಗ್ರಾಮದ ಶ್ರೀ ಗುರು ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳ ಜಾತ್ರಾ ಮಹೋತ್ಸವ ಅಂಗವಾಗಿ ಸೋಮವಾರ (ಏ.11) ಸಂಜೆ ರಥೋತ್ಸವ ಅಪಾರ ಭಕ್ತ ಸಮೂಹದ ಮಧ್ಯೆ ಸಂಭ್ರಮದಿಂದ ಜರುಗಿತು.
ಅಮ್ಮಿನಬಾವಿಯ ಅಭಿನವ ಶಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀಮಠದ ಗುರುಸಿದ್ದಯ್ಯ ಹಿರೇಮಠ, ಚನ್ನವೀರಯ್ಯ ಹಿರೇಮಠ, ಮಾಜಿ ಶಾಸಕ ಎಸ್.ಐ.ಚಿಕ್ಕನಗೌಡ್ರ, ಗ್ರಾಂಅಧ್ಯಕ್ಷ ಮಲ್ಲಿಕಾರ್ಜುನ ಕಳ್ಳಿಮನಿ ಸೇರಿದಂತೆ ಮುಂತಾದವರು ರಥೋತ್ಸವಕ್ಕೆ ಸಾಕ್ಷಿಯಾದರು. ಬೆಳಿಗ್ಗೆ ಕರ್ತೃ ಗದ್ದುಗೆಗೆ ಮಹಾ ರುದ್ರಾಭಿಷೇಕ, ಅಲಂಕಾರ, ಹಾಗೂ ಮಹಾ ಮಂಗಳಾರತಿಗಳು ನಡೆದವು, ಸಂಜೆ ಭಕ್ತರು ಶ್ರೀ ಗುರು ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳ ಘೋಷಣೆಗಳನ್ನು ಹಾಕುತ್ತಾ ತೆರನ್ನು ಎಳೆದು ಉತ್ತತ್ತಿ, ಹಣ್ಣು, ಎಸೆದು ಭಕ್ತಿಭಾವ ಮೆರೆದರು.
ನಂತರ ಮಠದ ಬೀದಿಯಿಂದ ಶಾಲೆಯವರೆಗೆ ಕಳಸವನ್ನು ಸಕಲ ವಾಧ್ಯ ಗೋಷ್ಠಿ, ಕಳಸಾರತಿಗಳೊಂದಿಗೆ ಅದ್ಧೂರಿಯಿಂದ ಮೆರವಣಿಗೆ ಮಾಡಲಾಯಿತು. ಡೊಳ್ಳಿನ ಮೇಳ ಸೇರಿದಂತೆ ಅನೇಕ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಕಳಸದ ಮೆರವಣಿಗೆಗೆ ರಂಗು ನೀಡಿದವು. ನೋಡುಗರನ್ನು ಆಕರ್ಷಿಸಿ ಕಣ್ಮನ ತಣಿಸಿದವು.
ನಂತರ ಕಳಸಾರೋಹಣ ಜರುಗಿತು. ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡು ಕರ್ತೃ ಗದ್ದುಗೆಯ ಹಾಗೂ ಶ್ರೀಗಳ ದರ್ಶನವನ್ನು ಪಡೆದು ಪುನೀತರಾದರು. ಜಾತ್ರಾ ಮಹೋತ್ಸವದಲ್ಲಿ ಸಮೀಪದ ಗ್ರಾಮಗಳಾದ ಅದರಗುಂಚಿ, ನೂಲ್ವಿ, ಬುಡರಸಿಂಗಿ, ಶೆರೆವಾಡ, ಗಬ್ಬೂರ ಸೇರಿದಂತೆ ಮುಂತಾದ ಗ್ರಾಮಗಳ ಭಕ್ತರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.