ಹುಬ್ಬಳ್ಳಿ: ಭಗತ್ ಸಿಂಗ್ ಜನ್ಮದಿನವನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಣೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಭಗತ್ ಸಿಂಗ್ ಅಭಿಮಾನಿಯೊರ್ವ ತನ್ನ ಜನ್ಮ ದಿನದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಕ್ತದಲ್ಲಿ ಪತ್ರ ಬರೆಯುವ ಮೂಲಕ ಗಮನ ಸೆಳೆದಿದ್ದಾರೆ.
ಹುಬ್ಬಳ್ಳಿಯ ನವನಗರದ ನಿವಾಸಿ ಹಾಗೂ ಭಗತಸಿಂಗ್ ಯುವಕ ಮಂಡಲದ ಅಧ್ಯಕ್ಷ ಶ್ರೀಧರಸಿಂಗ್ ಸಾಂಗ್ಲಿಕರ ಎಂಬಾತನೇ ಪ್ರಧಾನಿಗೆ ತನ್ನ ರಕ್ತದಲ್ಲಿ ಎರಡು ಪುಟಗಳ ಪತ್ರ ಬರೆದವನಾಗಿದ್ದು, ಭಗತ್ ಸಿಂಗ್ ರ ಅಪ್ಪಟ್ಟ ಅಭಿಮಾನಿಯಾಗಿದ್ದಾನೆ. ಕಳೆದ ಹಲವಾರು ವರ್ಷಗಳಿಂದ ದೇಶ ಭಕ್ತ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದು, ಇದೀಗ ಹುಬ್ಬಳ್ಳಿಯ ಹೊಸೂರಿನ ಗಾಳಿ ದುರ್ಗಮ್ಮಾ ದೇವಸ್ಥಾನದ ಬಳಿ ನಿಗಧಿ ಮಾಡಿರುವ ಕ್ರಾಂತಿಕಾರಿ ಭಗತ್ ಸಿಂಗ್ ವೃತ್ತದಲ್ಲಿ ಅತ್ಯದ್ಭುತ ಭಗತ್ ಸಿಂಗ್ ರವರ ಪ್ರತಿಮೆ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿ ಸ್ಥಳೀಯ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದು, ಅದರಂತೆ ಪ್ರಧಾನಿಗೂ ಪತ್ರ ಬರೆದಿದ್ದಾರೆ.
ಇದಲ್ಲದೇ ಕಾಲೇಜು ಶಿಕ್ಷಣದಲ್ಲಿ ಭಗತ್ ಸಿಂಗ್ ಪಠ್ಯಕ್ರಮ ಅಳವಡಿಕೆ, ರೈಲುಗಳಿಗೆ ಭಗತ್ ಸಿಂಗ್ ಹೆಸರು ನಾಮಕರಣ ಮಾಡುವುದು, ಸೈನಿಕ ತರಭೇತಿ ಕೇಂದ್ರಗಳಿಗೆ ಭಗತ್ ಸಿಂಗ್ ಹೆಸರು ಇಡುವುದು, ಅಮೃತ ಮಹೋತ್ಸವ ಆಚರಣೆಯಲ್ಲಿ ಜಿಲ್ಲಾ ಕೇಂದ್ರಗಳಲ್ಲೂ ಸ್ವಾತಂತ್ರ್ಯೋತ್ಸವ ಪಾರ್ಕ್ ಸ್ಥಾಪನೆ, ವೀರ ಮರಣ ಹೊಂದಿದ ಸೈನಿಕರಿಗೆ ಅಮರ ಜವಾನ್ ಭಗತ್ ಸಿಂಗ್ ಪ್ರಶಸ್ತಿ ಸ್ಥಾಪಿಸಿ ಸೈನಿಕ ದಿನದಂದು ಕುಟುಂಬದ ಸದಸ್ಯರಿಗೆ ಪ್ರಶಸ್ತಿ ನೀಡುವುದು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಪ್ರತಿಮೆ ನಿರ್ಮಾಣ, ಪ್ರಮುಖ ರಸ್ತೆಗಳಿಗೆ ಭಗತ್ ಸಿಂಗರ ಹೆಸರು ನಾಮಕರಣ ಮಾಡಬೇಕೆಂದು ಬಿಳಿ ಹಾಳೆಗಳನ್ನು ರಕ್ತಮಯವಾಗಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ತನ್ನ ಹುಟ್ಟು ಹಬ್ಬವನ್ನು ವಿಶಿಷ್ಟವಾಗಿ ಆಚರಣೆ ಮಾಡಿದ್ದಾನೆ.