ಹುಬ್ಬಳ್ಳಿ: ಪ್ರೀತಿ-ಪ್ರೇಮ, ನೋವು-ನಲಿವು, ಸಂತೋಷ-ದುಖಃ ಈ ಎಲ್ಲಾ ಭಾವನೆಗಳು ಕೇವಲ ಮನುಷ್ಯರಿಗೆ ಅಷ್ಟೇ ಸೀಮಿತ ಅಲ್ಲ. ಇದು ಪ್ರಾಣಿಗಳಲ್ಲೂ ಕೂಡ ಇದೆ ಎನ್ನುವುದಕ್ಕೆ ಹುಬ್ಬಳ್ಳಿಯಲ್ಲಿ ನಡೆದ ಈ ಘಟನೆಯೇ ಸಾಕ್ಷಿಯಾಗಿದೆ. ಇಲ್ಲಿನ ಲ್ಯಾಮಿಂಗ್ಟನ್ ರಸ್ತೆಯಲ್ಲಿ ಬಿಆರ್ ಟಿಎಸ್ ಚಿಗರಿ ಬಸ್ಸೊಂದು ಡಿಕ್ಕಿಯಾದ ಕಾರಣ ಎಮ್ಮೆಯ ಕೊಂಬು ಮುರಿದು ತೀವ್ರವಾದ ರಕ್ತಸ್ರಾವವಾಗುತ್ತಿತ್ತು. ಎಮ್ಮೆಗೆ ಗಾಯಗೊಂಡಿದ್ದನ್ನು ಕಂಡ ಇತರ ಎಮ್ಮೆಗಳು ನೋಡಿ ಹಂಬಿಲಸುತ್ತಾ ರಸ್ತೆಯಲ್ಲಿ ನಿಂತ ದೃಶ್ಯ ಮನಕಲಕುವಂತಿತ್ತು.
ಮಾ.24 ರಂದು ಬೆಳಿಗ್ಗೆ 11:45 ರ ಸುಮಾರಿಗೆ ನಗರದ ಗೌಳಿಗಳು ತಾವು ಸಾಕಿದ್ದ ಎಮ್ಮೆಗಳನ್ನು ಮೇಯಿಸಲು ನಗರದ ಹೊರಗಡೆ ಹೊಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಚಿಗರಿ ಬಸ್ಸಿಗೆ ಎಮ್ಮೆ ಡಿಕ್ಕಿಯಾಗಿದೆ. ಪರಿಣಾಮ ಅಪಘಾತದಲ್ಲಿ ಎಮ್ಮೆಯ ಕೊಂಬು ಮುರಿದಿತ್ತು. ಗಾಯಗೊಂಡ ಎಮ್ಮೆಯ ಸ್ಥಿತಿ ನೋಡಿ ಉಳಿದ ಎಮ್ಮೆಗಳು ಘಟನಾ ಸ್ಥಳದಲ್ಲಿಯೇ ನಿಂತಿದ್ದವು. ಈ ದೃಶ್ಯ ಎಂಥವರನ್ನೂ ಭಾವಪರವಶರನ್ನಾಗಿ ಮಾಡಿತ್ತು. ಈ ಎಲ್ಲ ದೃಶ್ಯಗಳು ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ.
ಒಟ್ಟಾರೆಯಾಗಿ ನಾಗರಿಕ ಸಮಾಜದಲ್ಲಿ ಮಾನವೀಯತೆ ಕಡಿಮೆ ಆಗುತ್ತಿರುವ ಇಂತಹ ಸಂದರ್ಭದಲ್ಲಿ ಮೂಕ ಪ್ರಾಣಿಗಳ ಕುರುಳಿನ ಕೂಗು ಮಾತ್ರ ಹೃದಯಸ್ಪರ್ಶಿಯಾಗಿದೆ.