ಕಾಡಯ್ಯನವರು ಮತ್ತೊಮ್ಮೆ ಹುಟ್ಟಿ ಬರಲಿ…; ಬಸವರಾಜ ಬೊಮ್ಮಾಯಿ
ಹುಬ್ಬಳ್ಳಿ : ಲಿಂ. ವೇದಮೂರ್ತಿ ಕಾಡಯ್ಯ ಹಿರೇಮಠ ಅವರು ಮತ್ತೊಮ್ಮೆ ಜನ್ಮತಾಳಲಿ. ಅವರ ಆದರ್ಶ, ತತ್ವಗಳನ್ನು ಜೀವನದಲ್ಲಿ ಎಲ್ಲರೂ ಅಳವಡಿಸಿಕೊಳ್ಳೋಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನುಡಿದರು.
ನಗರದ ಕುಸುಗಲ್ ರಸ್ತೆಯ ಶಬರಿ ನಗರದ ಸಮೀಪ ಹಮ್ಮಿಕೊಂಡಿದ್ದ ಶ್ರೀ ಕಾಡಯ್ಯ ಹಿರೇಮಠ ಅವರ 81 ನೇ ಜನ್ಮ ಸಂಸ್ಮರಣ ದಿನಾಚರಣೆ ಅಂಗವಾಗಿ ಅವರ ಕಂಚಿನ ಪುತ್ಥಳಿ ಅನಾವರಣ ಹಾಗೂ ಗ್ರಂಥ ಬಿಡುಗಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕಾಡಯ್ಯ ಅಜ್ಜನವರದ್ದು ಅಪರೂಪದಲ್ಲಿಯೇ ಅಪರೂಪದ ವ್ಯಕ್ತಿತ್ವ. ಅವರದ್ದು ಮಗುವಿನಂತಹ ಮನಸ್ಸು, ನೇರ ನುಡಿಯ ವ್ಯಕ್ತಿತ್ವ ಹೊಂದಿದವರಾಗಿದ್ದರು. ನಮ್ಮ ತಂದೆ ಎಸ್.ಆರ್.ಬೊಮ್ಮಾಯಿ ಅವರ ಕಾಲದಿಂದಲೂ ನಮ್ಮ ಜೊತೆ ಉತ್ತಮ ಒಡನಾಟ ಹೊಂದಿದ್ದರು. ಹಾಗಾಗಿ ನಮ್ಮ ತಂದೆಯವರು ಹಾಗೂ ಅವರದ್ದು ಭಾವನಾತ್ಮಕ ಸಂಬಂಧ ಹೊಂದಿದವರಾಗಿದ್ದರು. ಹುಬ್ಬಳ್ಳಿಯ 09 ಗ್ರಾಮಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಪ್ರಮಾಣಿಕ ಸೇವೆಗೈಯುವ ಮೂಲಕ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು ಎಂದರು.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾತನಾಡಿ, ಕಾಡಯ್ಯ ಅವರ ಬದುಕು ನಮಗೆ ದಾರಿದೀಪವಾಗಿದ್ದು, ಓರ್ವ ನಿಷ್ಕಲ್ಮಶ ವ್ಯಕ್ತಿಯಾಗಿದ್ದರು ಎಂದು ಬಣ್ಣಿಸಿದರು. ಅವರು ಮಹಾನಗರ ಪಾಲಿಕೆ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದ ಅವರು ನಂತರ ಭ್ರಷ್ಟಾಚಾರದ ಹಿನ್ನೆಲೆಯಲ್ಲಿ ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ 1 ದಿನದಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಪ್ರಸ್ತುತ ಸ್ಮರಣೀಯ ಎಂದರು.
ಮಾಜಿ ಮುಖ್ಯಮಂತ್ರಿ, ಶಾಸಕರಾದ ಜಗದೀಶ್ ಶೆಟ್ಟರ್ ಮಾತನಾಡಿ, ಕಾಡಯ್ಯ ಅವರು ಸಾಮಾಜಿಕ ಕಳಕಳಿ ಹೊಂದಿದವರಾಗಿದ್ದು, ಜನಪರ ಕಾರ್ಯಗಳಿಂದಲೂ ಗಮನ ಸೆಳೆದ ವ್ಯಕ್ತಿತ್ವ ಅವರದಾಗಿತ್ತು. ಅವರ ಕಂಚಿನ ಪ್ರತಿಮೆಯಿಂದಲೇ ಅವರ ನೆನಪನ್ನು ಸದಾ ಇಟ್ಟುಕೊಳ್ಳೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ದಿವ್ಯ ಸಾನಿಧ್ಯ ವಹಿಸಿದ್ದ ಬಾಳೆಹೊನ್ನೂರಿನ ಶ್ರೀ ಮದ್ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು, ಸಚಿವರಾದ ಸಿ.ಸಿ.ಪಾಟೀಲ್, ಶಂಕರ್ ಪಾಟೀಲ್ ಮುನೇನಕೊಪ್ಪ, ಬಸವರಾಜ ಹೊರಟ್ಟಿ, ಅಮೃತ ದೇಸಾಯಿ, ಸುಳ್ಳ ಗ್ರಾಮದ ಡಾ. ಕೊಟ್ಟೂರ ಬಸವೇಶ್ವರ ಶಿವಾಚಾರ್ಯ, ಶಿರಕೋಳದ ಶ್ರೀ ಗುರುಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು ಸೇರಿದಂತೆ ಮುಂತಾದ ಗಣ್ಯಮಾನ್ಯರು ಉಪಸ್ಥಿತರಿದ್ದರು.