ಉಕ್ರೇನ್ ನಲ್ಲಿನ ಭಾರತೀಯ ವಿದ್ಯಾರ್ಥಿಗಳನ್ನು ರಕ್ಷಿಸುವಂತೆ ಆಪ್ ಮನವಿ
ಹುಬ್ಬಳ್ಳಿ: ಉಕ್ರೇನ್ ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳನ್ನು ರಕ್ಷಿಸಲು ಭಾರತ ಸರ್ಕಾರ ಗಂಗಾ ಯೋಜನೆ ಜಾರಿಗೆ ತಂದಿದ್ದು, ಕೂಡಲೇ ಸರ್ಕಾರ ಈ ಯೋಜನೆಯನ್ನು ತೀವ್ರಗೊಳಿಸಿ ರಾಷ್ಟ್ರದ ಎಲ್ಲ ವಿದ್ಯಾರ್ಥಿಗಳನ್ನು ರಕ್ಷಿಸಿ ಸುರಕ್ಷಿತವಾಗಿ ರಾಷ್ಟ್ರಕ್ಕೆ ಕರೆತರುವಂತೆ ಆಮ್ ಆದ್ಮಿ ಪಕ್ಷ ನಗರದಲ್ಲಿಂದು ಒತ್ತಾಯಿಸಿತು.
ಇಲ್ಲಿನ ತಹಶಿಲ್ದಾರರ ಕಚೇರಿ ಆವರಣದಲ್ಲಿ ಜಮಾವಣೆಗೊಂಡ ಆಪ್ ಕಾರ್ಯಕರ್ತರು, ಪ್ರಪಂಚ ಮತ್ತೊಂದು ಯುದ್ದಕ್ಕೆ ಸಾಕ್ಷಿಯಾಗಿದೆ. ಉಕ್ರೇನ್ ಹಾಗೂ ರಷ್ಯ ನಡುವಿನ ಯುದ್ದ ದಿನದಿಂದ ದಿನಕ್ಕೆ ತೀವ್ರತೆಯನ್ನು ಪಡೆಯುತ್ತಿದೆ. ಅತಿ ಹೆಚ್ಚು ಸಾವು ನೋವು ಸಂಭವಿಸುತ್ತಲೇ ಇದೆ. ಇಂತಹ ಸಂದರ್ಭಗಳಲ್ಲಿ ನಮ್ಮ ದೇಶದ ಪ್ರಜೆಗಳು ಸಹಿತ ಉನ್ನತ ಶಿಕ್ಷಣ ಪಡೆದುಕೊಳ್ಳಲು ಉಕ್ರೇನ್ ದೇಶದಲ್ಲಿದ್ದು, ಇವರನ್ನು ಸುರಕ್ಷಿತವಾಗಿ ಕರೆತರಲು ಕಾರ್ಯವನ್ನು ತಾವುಗಳು ಯುದ್ದೋಪಾದಿಯಲ್ಲಿ ಮಾಡಬೇಕು. ಈಗಾಗಲೇ ಮಂಗಳವಾರ ದಿನ ನಡೆದ ಯುದ್ದದಲ್ಲಿ ಕರ್ನಾಟಕ ರಾಜ್ಯದ ಹಾವೇರಿ ಮೂಲದ ಯುವಕ ನವೀನ ಮಿಸೆಲ್ ದಾಳಿಗೆ ಬಲಿಯಾಗಿದ್ದಾರೆ. ಇದರಿಂದ ಅವರ ಕುಟುಂಬ ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ. ನವೀನ ಕುಟುಂಬದಂತೆ ದೇಶದ ಇತರ ನಾಗರಿಕರು ಉಕ್ರೇನ್ ನಲ್ಲಿ ಸಿಲುಕಿದ್ದು ಅವರನ್ನು ತಾವುಗಳು ಶೀಘ್ರವಾಗಿ ರಾಷ್ಟ್ರಕ್ಕೆ ಕರೆತರುವ ಕೆಲಸ ಮಾಡಬೇಕೆಂದು ಒತ್ತಾಯಿಸಿದರು.
ಇದೇ ವೇಳೆ ಪಕ್ಷದ ಜಿಲ್ಲಾಧ್ಯಕ್ಷ ಅನಂತಕುಮಾರ ಬುಗಡಿ ಮಾತನಾಡಿ, ಭಾರತ ಯುವರಾಷ್ಟ್ರ ಇಲ್ಲಿ ಅತಿ ಹೆಚ್ಚು ಕೌಶಲ್ಯ ಭರಿತ ಪ್ರತಿಭಾವಂತ ಯುವಕರಿದ್ದು, ಇವರಿಗೆ ದೇಶದಲ್ಲಿ ಕೈಗೆಟುಕುವ ದರದಲ್ಲಿ ಗುಣಮಟ್ಟದ ಶಿಕ್ಷಣ ಸಿಗದ ಕಾರಣ ಅನ್ಯ ರಾಷ್ಟ್ರಗಳಿಗೆ ತೆರಳುವಂತಾಗಿದೆ. ಅದರಲ್ಲೂ ಮುಖ್ಯವಾಗಿ ವೈದ್ಯಕೀಯ ಶಿಕ್ಷಣ ಪಡೆಯಲು ಪ್ರತಿಭಾವಂತರು ಎಷ್ಟೇ ಅತಿ ಹೆಚ್ಚು ಅಂಕಗಳನ್ನು ಪಡೆದುಕೊಂಡರು ಸಹಿತ ಭ್ರಷ್ಟಾಚಾರ ಮತ್ತು ರಾಜಕೀಯ ದಬ್ಬಾಳಿಕೆಯಿಂದ ಅವರಿಗೆ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಸಿಗುತ್ತಿಲ್ಲ. ಸಿಕ್ಕರೂ ಸಹಿತ ಕೋಟ್ಯಾಂತರ ರೂಪಾಯಿ ಕೊಡಬೇಕಾಗಿದೆ. ಇದರ ಪರಿಣಾಮ ಬಡವರು, ಮಧ್ಯಮ ವರ್ಗಕ್ಕೆ ಈ ಶಿಕ್ಷಣ ಕನಸಿನ ಮಾತಾಗಿದೆ. ಈ ಕಾರಣದಿಂದ ಪಾಲಕರು ಸಾಲಸೋಲ ಮಾಡಿ ಮಕ್ಕಳ ಆಸೆಯಂತೆ ಅವರಿಗೆ ಶಿಕ್ಷಣ ದೊರಕಿಸಲು ಉಕ್ರೇನ್ ನಂತಹ ದೇಶಕ್ಕೆ ಮೊರೆ ಹೋಗುವಂತಾಗಿದೆ, ಅಲ್ಲಿ ಇದೇ ವೈದ್ಯಕೀಯ ಶಿಕ್ಷಣ 30-40ಲಕ್ಷಗಳಲ್ಲಿ ಪೂರ್ಣಗೋಳಿಸಬಹುದು. ಹಾಗಾಗಿ ವಿಶ್ವ ಗುರು ಎಂದು ಕರೆಸಿಕೊಳ್ಳುವ ನಮ್ಮ ದೇಶದಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ ಎಂಬುದನ್ನು ಆಮ್ ಆದ್ಮಿ ಪಕ್ಷ ತೀವ್ರವಾಗಿ ಖಂಡಿಸುತ್ತದೆ. ಈಗಾಗಲೇ ನಮ್ಮ ಪಕ್ಷ ದೆಹಲಿಯಲ್ಲಿ ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ಮಾಡಿ ಸರ್ಕಾರಿ ಶಾಲೆಗಳಲ್ಲಿಯೇ ವಿಶ್ವಮಟ್ಟದ ಗುಣಮಟ್ಟದ ಶಿಕ್ಷಣವನ್ನು ಉಚಿತವಾಗಿ ನೀಡುತ್ತಿದೆ. ಅದೇ ಮಾದರಿಯಲ್ಲಿ ತಾವುಗಳು ದೇಶದಲ್ಲಿ ಶಿಕ್ಷಣದಲ್ಲಿ ಕೆಲವು ಬದಲಾವಣೆ ಮಾಡಿ ಶಿಕ್ಷಣ ಕ್ರಾಂತಿ ಮಾಡಬೇಕೆಂದು ಆಗ್ರಹಿಸಿದರು.
ಇನ್ನು ಉಕ್ರೇನ್ ನಿಂದ ಮರಳಿಬಂದ ವಿದ್ಯಾರ್ಥಿಗಳ ಭವಿಷ್ಯ ಕೂಡ ಗೊಂದಲಮಯವಾಗಿದ್ದು ಈ ವಿದ್ಯಾರ್ಥಿಗಳ ಉಳಿದ ಶಿಕ್ಷಣ ಭಾರತದಲ್ಲಿನ ವೈದ್ಯಕೀಯ ಕಾಲೇಜುಗಳಲ್ಲಿ ಉಚಿತವಾಗಿ ಅಥವಾ ವಿನಾಯಿತಿ ದರದಲ್ಲಿ ಆಗುವ ಹಾಗೆ ವ್ಯವಸ್ಥೆ ಮಾಡಬೇಕೆಂದು ವಿದ್ಯಾರ್ಥಿಗಳ ಪರವಾಗಿ ಆಪ್ ತಹಶಿಲ್ದಾರರ ಮೂಲಕ ಪ್ರಧಾನಿಗಳಿಗೆ ಮನವಿ ಅರ್ಪಿಸಿದರು.
ಈ ಸಂದರ್ಭದಲ್ಲಿ ವಿಕಾಸ ಸೊಪ್ಪಿನ, ಶಶಿಕುಮಾರ್ ಸುಳ್ಳದ, ರೇವಣಸಿದ್ದಪ್ಪ ಹುಬ್ಬಳ್ಳಿ, ಮಲ್ಲಪ್ಪ ತಡಸದ, ಮಲ್ಲಿಕಾರ್ಜುನಯ್ಯ ಹಿರೇಮಠ, ಹಸನಸಾಬ ಇನಾಮದಾರ ಸೇರಿದಂತೆ ಮುಂತಾದವರು ಇದ್ದರು.